ವಿಶ್ವವೇ ಮೆಚ್ಚಿದೆ ಆದರ್ಶ ಗಾಂಧೀಜಿ: ಡಾ. ಜಿ ಪರಮೇಶ್ವರ್

KannadaprabhaNewsNetwork |  
Published : Oct 03, 2023, 06:06 PM IST
ತುಮಕೂರಿನಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಹಾರ ಹಾಕಿದ ಪರಮೇಶ್ವರ್ | Kannada Prabha

ಸಾರಾಂಶ

ವಿಶ್ವವೇ ಮೆಚ್ಚಿದೆ ಆದರ್ಶ ಗಾಂಧೀಜಿ: ಡಾ. ಜಿ ಪರಮೇಶ್ವರ್ತುಮಕೂರು ಜಿಲ್ಲೆಗೆ ಆಗಮಿಸಿದ್ದ ಮಹಾತ್ಮ । ಪಾಲಿಕೆಯಿಂದ ಬಾಪೂಜಿ ವಾಸವಿದ್ದ ಕೊಠಡಿ ಅಭಿವೃದ್ಧಿ । ಗಾಂಧಿ ಕನಸಿನ ಸ್ವಚ್ಛ ಭಾರತಕ್ಕೆ ಶ್ರಮಿಸಿ

ತುಮಕೂರು ಜಿಲ್ಲೆಗೆ ಆಗಮಿಸಿದ್ದ ಮಹಾತ್ಮ । ಪಾಲಿಕೆಯಿಂದ ಬಾಪೂಜಿ ವಾಸವಿದ್ದ ಕೊಠಡಿ ಅಭಿವೃದ್ಧಿ । ಗಾಂಧಿ ಕನಸಿನ ಸ್ವಚ್ಛ ಭಾರತಕ್ಕೆ ಶ್ರಮಿಸಿ ಕನ್ನಡಪ್ರಭ ವಾರ್ತೆ ತುಮಕೂರು ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಿದೆ ಎಂದು ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತುಮಕೂರು ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು ಆಗಮಿಸಿದ್ದರು. ಮೊದಲಿಗೆ 1927ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣಕ್ಕೆ ಬಂದು ಒಂದು ದಿನ ತಂಗಿ ಸ್ವಾತಂತ್ರ್ಯ ಹೋರಾಟ, ಅಸ್ಪೃಶ್ಯತೆ ಬಗ್ಗೆ ಕುರಿತು ಮಾತನಾಡಿದ್ದರು. 1930ರಲ್ಲಿ ಮತ್ತೊಮ್ಮೆ ತುಮಕೂರಿಗೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಿಗೆ ಹೇಳಿದ್ದರು. ಗಾಂಧೀಜಿಯವರು ತುಮಕೂರಿಗೆ ಭೇಟಿ ನೀಡಿ ತಂಗಿದ್ದ ಕೊಠಡಿಯನ್ನು ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ ಹಾಗೂ ಆ ಕೊಠಡಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗುತ್ತಿದ್ದ ಬ್ರಿಟಿಷರಿಗೆ ತನ್ನ ಅಹಿಂಸಾ ಮಾರ್ಗದ ಮೂಲಕ ಹೋರಾಟ ಮಾಡುವುದರ ಮುಖೇನ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು. ಮುಂದಿನ ಪೀಳಿಗೆಯ ಮಕ್ಕಳಿಗೆ ಗಾಂಧೀಜಿಯವರ ತತ್ವ ಆದರ್ಶಗಳನ್ನು ತಿಳಿಸಬೇಕು. ಆದ್ದರಿಂದ ಶಾಲಾ-ಕಾಲೇಜುಗಳಲ್ಲಿ ಅವರ ಬದ್ಧತೆ ಹಾಗೂ ಸಿದ್ಧಾಂತಗಳನ್ನು ತಿಳಿಸಬೇಕು ಎಂದು ಹೇಳಿದರು. ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದರನ್ವಯ ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಎಂಬ ವಿಶೇಷ ಕಾರ್ಯ ಕ್ರಮವನ್ನು ಅನುಷ್ಠಾನ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವು ಶಾಂತಿ ಪ್ರಿಯ ದೇಶ ಎಂದು ಕರೆಸಿಕೊಂಡಿದೆ. ಆದ್ದರಿಂದ ನಮ್ಮ ರಾಜ್ಯ ಸರ್ಕಾರವು ನಾಗರಿಕರು ಶಾಂತಿಯಿಂದ ಜೀವನ ನಡೆಸುವ ಸಲುವಾಗಿ ನಮ್ಮ ಸರ್ಕಾ ಬದ್ಧವಾಗಿದೆ. ರಾಜ್ಯದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದಾಗ ಅವುಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುವುದು ಹಾಗೂ ಪ್ರಚೋದನೆ ನೀಡುವ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಕಡಿಮೆ ಅವಧಿಯಲ್ಲಿಯೇ ದೇಶದ ಒಳಿತಿಗಾಗಿ ಅನೇಕ ವಿಚಾರಗಳನ್ನು ತೆಗೆದುಕೊಂಡ ಧೀಮಂತ ನಾಯಕರು ಎಂದು ಹೇಳಿದರು. ಶಾಸ್ತ್ರಿಯವರು ಅಂದು ಕ್ಷೀರಕ್ರಾಂತಿಯನ್ನು ಪ್ರಾರಂಭಿಸಿದ ಪರಿಣಾಮ ಇಂದು ಭಾರತ ದೇಶವು ಇಡೀ ವಿಶ್ವದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನ ಪಡೆದಿದೆ. ಆಹಾರದ ಉತ್ಪಾದನೆಯನ್ನು ಹೆಚ್ಚಿಸಲು ಹಸಿರು ಕ್ರಾಂತಿಯನ್ನು ಆರಂಭಿಸಿ ನಮ್ಮ ದೇಶಕ್ಕೆ ಬೇಕಾದ ಆಹಾರ ಉತ್ಪನ್ನಗಳನ್ನು ನಮ್ಮ ದೇಶದಲ್ಲಿಯೇ ಬೆಳೆಯುವ ಹಾಗೆ ಮಾಡಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರ ಶಾಸಕ ಜ್ಯೋತಿ ಗಣೇಶ್, ಮಹಾನಗರ ಪಾಲಿಕೆಯ ಮೇಯರ್ ಪ್ರಭಾವತಿ, ಉಪ ಮೇಯರ್ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಆಯುಕ್ತೆ ಅಶ್ವಿಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ