ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ’ಗಾಂಧಿಸ್ಮೃತಿ- ಬೃಹತ್ ಜನಜಾಗೃತಿ ಸಮಾವೇಶ’ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮಹಾತ್ಮಗಾಂಧಿಯವರು ಬ್ರಿಟಿಷರ ವಿರುದ್ಧ ಹೋರಾಟ ಮುನ್ನೆಡೆಸಿ ರಾಷ್ಟ್ರಪಿತರಾದವರು. ಅವರ ಹೋರಾಟ ಅಹಿಂಸಾತ್ಮಕವಾಗಿರುವುದಲ್ಲದೇ ವಿಶ್ವದ ಅನೇಕ ರಾಷ್ಟ್ರಗಳ ಸ್ವಾತಂತ್ರ್ಯಕ್ಕೆ ಪ್ರೇರಣೆ ಯಾಗಿತ್ತು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ತಾಲೂಕಿನ ಬೀಕನಹಳ್ಳಿ ಸಮೀಪದ ವಿದ್ಯಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ನವ ಜೀವನ ಸಮಿತಿ ಸಹಯೋಗದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ’ಗಾಂಧಿಸ್ಮೃತಿ- ಬೃಹತ್ ಜನಜಾಗೃತಿ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿರುವ ವೈಪರೀತ್ಯ ಸರಿದೂಗಿಸಿ ಸಾತ್ವಿಕ ಬದುಕು ಕಟ್ಟಿಕೊಡುವುದೇ ಜನಜಾಗೃತಿ ವೇದಿಕೆಯ ಕಾರ್ಯ. ದುಶ್ಚಟಕ್ಕೊಳಗಾದವರ ಮನಸ್ಸು ಪರಿವರ್ತನೆ ಮಾಡುವ ಮೂಲಕ ಅವರ ಬದುಕನ್ನು ಹಸನಾಗಿಸುವುದಲ್ಲದೇ ಅವರ ಕುಟುಂಬಕ್ಕೆ ಬೆಳಕು ನೀಡುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು. ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ವೇದಿಕೆ. ಸಾವಿರಾರು ಮಹಿಳೆಯರು ಸ್ವಸಹಾಯ ಸಂಘದ ರೂಪದಲ್ಲಿ ಸಾಲ ಸೌಲಭ್ಯ ಪಡೆದು ಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಡರಾಗುವ ಟ್ರಸ್ಟ್ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ಗಾಂಧೀಜಿಯವರ ಕನಸಿನಂತೆ ದುಶ್ಚಟ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಯೋಜನೆ ಮದ್ಯವರ್ಜನ ಶಿಬಿರ ಆಯೋಜನೆ ಮಾಡುವ ಮೂಲಕ ಶಿಬಿರಾರ್ಥಿಗಳಿಗೆ ಹೊಸ ಜೀವನ ರೂಪಿಸಿಕೊಟ್ಟಿದೆ ಎಂದು ಹೇಳಿದರು. ವಕೀಲರಾದ ಡಿ.ಎಸ್.ಮಮತಾ ಮಾತನಾಡಿ, ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಸ್ವಾವಲಂಬಿಯಾಗಿ ಹೊರಹೊಮ್ಮಬೇಕು. ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಮಹಿಳೆಯರನ್ನು ಸ್ವಾವಲಂಬನೆಯತ್ತ ಮುನ್ನೆಡೆಸುತ್ತಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ನಿಂದ ಎಐಟಿ ವೃತ್ತದಿಂದ ವಿದ್ಯಾಭವನದವರೆಗೂ ದುಶ್ಚಟದಿಂದಾಗುವ ಪರಿಣಾಮ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶೈಲಾ, ಸೆಲ್ಕೋ ಸೋಲಾರ್ ಪ್ರಬಂಧಕ ದಯಾನಂದ್, ಯೋಜನಾಧಿಕಾರಿ ರಮೇಶ್ ನಾಯಕ್, ವಲಯದ ಮೇಲ್ವಿಚಾರಕ ಚಂದನ್, ಸಿರಿ ಮಿಲ್ಲೆಟ್ ಮೇಲ್ವಿಚಾರಕಿ ಭೂಮಿಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ವೃಂದ, ಸೇವಾ ಪ್ರತಿನಿಧಿಗಳಾದ ಪ್ರೇಮ, ಲತಾ, ನಿರ್ಮಲ, ಹೇಮಲತಾ, ಸೌಮ್ಯ, ಸಂಧ್ಯಾ, ಆರತಿ, ವಿಜಯ್‌ಕುಮಾರ್ ಹಾಜರಿದ್ದರು. 12 ಕೆಸಿಕೆಎಂ 5 ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ ಸಮೀಪದ ವಿದ್ಯಾಭವನದಲ್ಲಿ ನಡೆದ ’ಗಾಂಧಿಸ್ಮೃತಿ- ಬೃಹತ್ ಜನಜಾಗೃತಿ ಸಮಾವೇಶ’ವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಪ್ರಕಾಶ್‌ರಾವ್, ಮಮತಾ, ನಾಗರಾಜ್‌ರಾವ್ ಕಲ್ಕಟ್ಟೆ ಇದ್ದರು.