ಗಾಂಧೀಜಿ ಉಡುಪಿ ಭೇಟಿ ಅಸ್ಪೃಶ್ಯ ನಿವಾರಣಾ ಚಳವಳಿಯ ಭಾಗವಾಗಿತ್ತು: ಯು. ವಿನೀತ್ ರಾವ್

KannadaprabhaNewsNetwork |  
Published : Oct 05, 2024, 01:35 AM IST
ರಥಬೀದಿ4 | Kannada Prabha

ಸಾರಾಂಶ

ಉಡುಪಿ ರಥಬೀದಿ ಗೆಳೆಯರು ಸಂಘಟನೆಯ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ‘ಗಾಂಧೀಜಿ ಉಡುಪಿ ಭೇಟಿ - ಒಂದು ಅವಲೋಕನ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸುಮಾರು 90 ವರ್ಷದ ಹಿಂದೆ, 1934 ಫೆ.25ರಂದು ಮಹಾತ್ಮ ಗಾಂಧಿ ಅವರು ಉಡುಪಿಗೆ ಭೇಟಿ ನೀಡಿದ್ದರು. ಮುಖ್ಯವಾಗಿ ಅವರು ಮಹಾರಾಷ್ಟ್ರದ ವಾರ್ಧಾದಿಂದ ಕೈಗೊಂಡ ಅಸ್ಪೃಶ್ಯ ನಿವಾರಣೆಯ ಯಾತ್ರೆಯ ಅಂಗವಾಗಿ ಉಡುಪಿಗೆ ಬಂದಿದ್ದರು. ಉಡುಪಿಯ ಅಜ್ಜರಕಾಡಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತಾಡಿದ್ದರು. ಶ್ರೀಕೃಷ್ಣ ಮಠದ ರಥಬೀದಿ ಬಳಿಯಿಂದಲೇ ನಿರ್ಗಮಿಸಿದರು ಕೂಡ ಶ್ರೀಕೃಷ್ಣನ ದರ್ಶನ ಮಾಡಲಿಲ್ಲ. ದೇಶದ ಎಲ್ಲೆಡೆ ಸರ್ವರಿಗೂ ಪ್ರವೇಶ ಇಲ್ಲದ ದೇವಾಲಯಗಳಿಗೆ ತಾನು ಭೇಟಿ ನೀಡುವುದಿಲ್ಲ ಎಂಬ ಅವರ ನಿಲುವಿನ ಕಾರಣದಿಂದ ತಮಿಳುನಾಡಿನ ಜಗತ್ಪ್ರಸಿದ್ಧ ಶ್ರೀರಂಗಮ್ ದೇವಾಲಯಕ್ಕೂ ಹೋಗಲಿಲ್ಲ ಎಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು. ವಿನೀತ ರಾವ್ ಹೇಳಿದರು.ಅವರು ಉಡುಪಿ ರಥಬೀದಿ ಗೆಳೆಯರು ಸಂಘಟನೆಯ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡ ‘ಗಾಂಧೀಜಿ ಉಡುಪಿ ಭೇಟಿ - ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಮಾತನಾಡಿದರು.ಗಾಂಧೀಜಿಯವರನ್ನು ಉಡುಪಿಗೆ ಕರೆತರುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಈ ಬಗ್ಗೆ ಇಲ್ಲಿಯ ಹಲವು ಗಾಂಧೀವಾದಿ ಹಿರಿಯರು ಕಾರ್ನಾಡ್ ಸದಾಶಿವ ರಾವ್ ನೇತೃತ್ವದಲ್ಲಿ ತುಂಬಾ ಪರಿಶ್ರಮ ಪಟ್ಟಿದ್ದರು. ಆ ಕಾಲದ ಮಹಾದಾನಿ ಉಡುಪಿಯ ಹಾಜಿ ಅಬ್ದುಲ್ಲ ಸಾಹೇಬರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಗಾಂಧೀಜಿ ಅಪೇಕ್ಷೆ ಮೇರೆಗೆ ಹರಿಜನ ಕಲ್ಯಾಣ ಮತ್ತು ಬಿಹಾರ ಭೂಕಂಪ ನಿಧಿಗೆ ಅಂದು ಉಡುಪಿ ಜನ 1254 ರು. ದೇಣಿಗೆ ನೀಡಿದ್ದರು. ಅಂದಿನ ಕಾರ್ಯಕ್ರಮದ ಎಲ್ಲ ವರದಿ ಗಾಂಧೀಜಿ ಸಂಪಾದಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ಸವಿವರವಾಗಿ ಪ್ರಕಟಗೊಂಡಿತ್ತು ಎಂದರು. ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ನಾಗೇಶ್ ಕುಮಾರ್ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಮಣ್ಯ ಜೋಶಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಿ.ಪಿ. ಪ್ರಭಾಕರ ತುಮರಿ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...