ಕನ್ನಡಪ್ರಭ ವಾರ್ತೆ ಕಾರ್ಕಳ
ಗಾಂಧಿ ಈ ಕಾಲಕ್ಕೆ ಪ್ರಸ್ತುತವಾಗುವ ಸಂದರ್ಭವನ್ನು ನಾವು ಸೃಷ್ಟಿಸಿಕೊಳ್ಳಬೇಕು. ಅವರನ್ನು ಕಸಿಗೊಳಿಸುವ ಪ್ರಯತ್ನವನ್ನು ಮಾಡಬೇಕು. ಹರಿಯುವ ನದಿಯಂತೆ ಗಾಂಧಿಯ ವ್ಯಕ್ತಿತ್ವ, ಬದುಕನ್ನು ಇಡಿಯಾಗಿ ನೋಡಿದರೆ ಮಾತ್ರ ಗಾಂಧಿ ಸರಿಯಾಗಿ ಅರ್ಥವಾಗಲು ಸಾಧ್ಯ ಎಂದು ಕೋಟೇಶ್ವರ ಸರ್ಕಾರಿ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಧಾಕರ ದೇವಾಡಿಗ ಹೇಳಿದ್ದಾರೆ.ಅವರು ಇಲ್ಲಿನ ಶ್ರೀಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ-ಸಾಹಿತ್ಯ ವಿಚಾರ ವೇದಿಕೆ ಉಡುಪಿ ಮತ್ತು ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ ಶನಿವಾರ ‘ಕನ್ನಡ ಕಂಡ ಮನಸು - ಗಾಂಧಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.ಅಹಿಂಸೆ ಮತ್ತು ಸತ್ಯಾಗ್ರಹವನ್ನು ಒಂದು ವೃತದಂತೆ ಪಾಲಿಸಿದವರು ಗಾಂಧಿ. ಹಿಂಸೆ ಮತ್ತು ಯುದ್ಧಗಳಿಂದ ಮುಕ್ತತೆಯನ್ನು ಪಡೆಯಬೇಕೆಂದು ಹಂಬಲಿಸಿದವರು. ಇದೇ ದಾರಿಯಲ್ಲಿ ನಾವೂ ನಡೆಯಬೇಕು. ಇಲ್ಲದೆ ಹೋದರೆ ನಾವು ಮನುಷ್ಯರಾಗಿ ಉಳಿಯುವುದಿಲ್ಲ. ಮನುಷ್ಯನನ್ನು ಯಂತ್ರಗಳು ದಾಸ್ಯಕ್ಕೆ ಗುರಿಪಡಿಸುತ್ತವೆ. ಅವನ ಜೀವ ಚೈತನ್ಯವನ್ನು ಅವು ಕಸಿಯುವಂತೆ ಮಾಡುತ್ತವೆ ಅನ್ನುವುದಕ್ಕೆ ಗಾಂಧಿ ಯಂತ್ರ ವಿರೋಧಿಯಾಗಿದ್ದರೇ ಹೊರತು ಅಭಿವೃದ್ಧಿಗೆ ಅಲ್ಲ. ಇವತ್ತಿನ ಕಾಲಮಾನಕ್ಕೆ ಅವರ ಚಿಂತನೆಗಳು ನಿಜಕ್ಕೂ ದಾರ್ಶನಿಕ ಸತ್ಯವಾಗಿದೆ ಎಂದರು.ಶ್ರೀ ಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್‌ನ ಸಂಚಾಲಕ ವೆಂಕಟೇಶ ಪ್ರಭು, ಗಾಂಧಿಯ ಅಸ್ತಿತ್ವದ ಸಂಕೇತವಾದ ಚರಕವನ್ನು ಸುತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಎರ್ಮಾಳ್ ಮೋಹನ ಶೆಣೈ, ಸಾಹಿತ್ಯ ಸಂಘದ ಪ್ರತಿನಿಧಿಗಳಾದ ಹಿತ ಹಾಗೂ ಶ್ರೀನಿಧಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ.ವನಿತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ವಿಖ್ಯಾತ್ ಕುಲಾಲ್ ಗಾಂಧಿ ಪ್ರಿಯ ಮಂತ್ರ ಪಠಿಸಿದರು. ಚಕೋರ ಉಡುಪಿ ಜಿಲ್ಲಾ ಸಂಚಾಲಕ, ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ವಂದಿಸಿದರು.