ಮಧುಗಿರಿ: ಗಾಂಧೀಜಿ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಿಕ್ಸೂಚಿ ಆಗಬೇಕು. ಅವರ ರೂಢಿಸಿಕೊಂಡಿದ್ದ ಮಾನವೀಯ ಮೌಲ್ಯಗಳು ಇಂದಿನ ಯುವ ಜನಾಂಗಕ್ಕೆ ಜೀವನದ ಹಾದಿಯಲ್ಲಿ ಎಚ್ಚರದ ದನಿಯಾಗಬೇಕು ಎಂದು ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್.ಕುಮಾರ್ ಹೇಳಿದರು.
ಕಾಲೇಜು ಆವರಣ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಎನ್‌ಎಸ್‌ಎಸ್, ಸಾಂಸ್ಕೃತಿಕ ಸಮಿತಿ ಮತ್ತು ದೈಹಿಕ ಶಿಕ್ಷಣದ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹೂದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗಾಂಧೀಜಿ ಭಾರತೀಯರ ಜೀವನಕ್ಕೆ ಮಾರ್ಗದರ್ಶಿ, ಹರಿಶ್ಚಂದ್ರರ ಕಥೆಯ ಸತ್ಯ, ಅಹಿಂಸೆ ಮತ್ತು ತ್ಯಾಗ ಗಾಂಧಿಜಿಯವರ ಬದುಕಿಗೆ ಪ್ರೇರಣೆಯಾಗಿದ್ದವು. ದಕ್ಷಿಣ ಆಪ್ರಿಕಾದಲ್ಲಿ ಓದುತ್ತಿದಾಗ ವರ್ಣಭೇದ ನೀತಿ ಕಣ್ಣಾರೆ ಕಂಡರು. ಇಂತಹ ಸಮಸ್ಯೆಗಳು ನಮ್ಮ ದೇಶಕ್ಕೆ ಬರಬಾರದು ಎಂದು ಚಿಂತನೆ ನಡೆಸಿದ್ದರಲ್ಲದೆ ವರ್ಣ ನೀತಿಯ ವಿರುದ್ಧ ಹೋರಾಡಿ ಸ್ವತಂತ್ರಯ ಚಳವಳಿಯಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಹೋರಾಡಿದ್ದು ನಿಜಕ್ಕೂ ಅದ್ಬುತ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗೋವಿಂದರಾಯ ಮಾತನಾಡಿ, ಗಾಂಧೀಜಿ ಅವರ ವಿಚಾರಧಾರೆಗಳು ಸಾರ್ವಕಾಲಿಕವಾದವು. ಗ್ರಾಮಗಳ ಉದ್ಧಾರವಾಗದೆ ದೇಶದ ಏಳಿಗೆ ಆಸಾಧ್ಯ ಎಂದರಿತು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ನೀಡಿದರು. ಸರಳ ಬದುಕು ಉನ್ನತ ಚಿಂತನೆಯಿಂದ ಭಾರತೀಯರ ಮನ ಗೆದ್ದರು ಎಂದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ನಾಗರಾಜು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಗಾಂಧೀಜಿಯವರ ಪಾತ್ರ ಹಾಗೂ ಶಾಸ್ತ್ರೀಜಿ ಅವರ ಸರಳತೆ ಅತ್ಯಂತ ಹಿರಿದು, ಇವರ ಸೇವೆ ಮತ್ತು ತ್ಯಾಗ ಭಾರತದ ಆಡಳಿತದ ಆದರ್ಶಗಳು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ, ಡಾ.ಶಂಕರಲಿಂಗಯ್ಯ, ಸುರೇಶ್, ಮಂಜುನಾಥ್, ರಾಮಮೂರ್ತಿ, ಡಾ.ರಂಜಿತಾ, ಲೀಲಾವತಿ, ಭಾರ್ಗವಿ, ದುರ್ಗಪ್ಪ, ಕೆ.ಮುರುಳೀಧರ್, ಸಂಜೀವಮೂರ್ತಿ, ಬೋಧಕೇತರ ಸಿಬ್ಬಂದಿ ಇದ್ದರು.