- ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿಯವರೇ ಆದರ್ಶವೇ ಹೊರತು ಗೋಡ್ಸೆ ಅಲ್ಲ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಕೆಳಗೆ ಕುಳಿತು ಮಾತನಾಡಿದರು. ಇತ್ತೀಚಿನ ಪೀಳಿಗೆಗೆ ಗಾಂಧೀಜಿ ವಿಚಾರಗಳು ಮರೀಚಿಕೆಯಾಗುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಮೇಧಾವಿಗಳು. ದೇಶ ರಕ್ಷಣೆಗೆ ಮತ್ತು ಸಂವಿಧಾನ ರಚನೆಗೆ ಅವರ ಕೊಡುಗೆ ಅಪಾರ.
ಸ್ವಾತಂತ್ರದ ಬಳಿಕ ದೇಶದ ಸಂವಿಧಾನ ರಚನೆ, ಪ್ರಜಾಪ್ರಭುತ್ವ ವ್ಯವಸ್ಥೆ ಆಡಳಿತದ ಜಾತ್ಯಾತೀತ ಭಾರತ ನಿರ್ಮಾಣ ಮತ್ತು ಹೋರಾಟದಿಂದ ಗಾಂಧೀಜಿ ಮಹಾತ್ಮರಾದರು. ಆದರೆ ಯಾರಿಗೆ ಸ್ವಾತಂತ್ರ ತಂದುಕೊಟ್ಟರೋ ಅವರಿಂದಲೇ ಗಾಂಧೀಜಿ ಹತ್ಯೆಆಗಿದ್ದು ದುರಂತದ ಸಂಗತಿ, ಇದರ ಪರಿಣಾಮ ದೇಶದಲ್ಲಿ ಗಾಂಧಿ ಅನುಯಾಯಿಗಳು ಹಾಗು ಗೋಡ್ಸೆ ಅನುಯಾಯಿಗಳು ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ದೇಶ ಯಾವ ಸ್ಥಿತಿ ಯತ್ತ ಸಾಗುತ್ತಿದೆ ಎಂಬುದನ್ನು ತಿಳಿದು ದುಷ್ಟ ಶಕ್ತಿಯನ್ನು ದೂರವಿಡಬೇಕು. ಹಾಗಾಗಿ ಗಾಂಧೀಜಿ ಆದರ್ಶವಾಗಬೇಕೆಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಬ್ರಿಟೀಷರ ಸಂಕೋಲೆಯಲ್ಲಿದ್ದ ಭಾರತಕ್ಕೆ ಅಹಿಂಸಾ ಹೋರಾಟದ ಮೂಲಕ ಸ್ವಾತಂತ್ರ್ಯದ ಸಂಕಲ್ಪ ಮಾಡಿದ ಗಾಂಧೀಜಿ ಯಶಸ್ಸು ಕಂಡು ದೇಶದ ರಾಷ್ಟ್ರಪಿತರಾದರು.
ದೇಶದ ಎರಡನೇ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರೀ ಅಧಿಕಾರದಲ್ಲಿದ್ದಾಗ ಬರಗಾಲ ಆವರಿಸಿ ರೈತರು ಮತ್ತು ಸೇನಿಕರಿಗೆ ಧೈರ್ಯ ತುಂಬಿ ಹಸಿರು ಕ್ರಾಂತಿ ನಡೆಸಿದರು. ಈ ಇಬ್ಬರು ನಾಯಕರ ಕೊಡುಗೆ ದೇಶದಲ್ಲಿ ಅಜರಾಮರ ಎಂದರು.
--- ಬಾಕ್ಸ್ ---
ಕಡೂರು ಪುರಸಭೆಯಿಂದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಪುರಸಭೆ ಮುಂಭಾಗದಲ್ಲಿ ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಮಹಾತ್ಮ ಗಾಂದೀಜಿಯವರ ಭಾವಚಿತ್ರಕ್ಕೆ ಗುಲಾಬಿ , ತಳಿರು ತೋರಣ ಅಲಂಕಾರ ಗಮನ ಸೆಳೆಯಿತು. ಗಾಂಧೀಜಿಗೆ ಪ್ರಿಯವಾದ ಕಡಲೆ ಕಾಯಿ ಹಂಚಿದ್ದು ವಿಶೇಷವಾಗಿತ್ತು.
ಕಡೂರು ಪಟ್ಟಣದ ಪುರಸಭೆಯಲ್ಲಿ 155ನೇ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ನಡೆಯಿತು.
ಶಾಸಕ ಕೆ ಎಸ್ ಆನಂದ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸದಸ್ಯರು ಇದ್ದರು.