- ಬ್ರಹ್ಮಕುಮಾರೀಸ್ ದಾವಣಗೆರೆ ಸಂಸ್ಥೆ ಸುವರ್ಣ ಮಹೋತ್ಸವದಲ್ಲಿ ರಾಜಯೋಗಿನಿ ಚಕ್ರಧಾರಿ ದೀದಿ ವಿಷಾದ - - -
ಭಾರತವು ಆಂಗ್ಲರಿಂದ ಮುಕ್ತಿ ಪಡೆದು, ಸ್ವಾತಂತ್ರ್ಯ ಗಳಿಸಿ ಏಳೂವರೆ ದಶಕಗಳೇ ಕಳೆದರೂ ಇಂದಿಗೂ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಾಕಾರಗೊಂಡಿಲ್ಲ ಎಂದು ರಾಜಸ್ಥಾನದ ಅಬು ಪರ್ವದ ಬ್ರಹ್ಮಕುಮಾರೀಸ್‌ನ ಮಹಿಳಾ ವಿಭಾಗದ ಅಧ್ಯಕ್ಷರು, ರಷ್ಯಾದ ಕೇಂದ್ರದ ಪ್ರಧಾನ ನಿರ್ದೇಶಕಿ ರಾಜಯೋಗಿನಿ ಬ್ರಹ್ಮಕುಮಾರಿ ಚಕ್ರಧಾರಿ ದೀದಿ ವಿಷಾದಿಸಿದರು.
ನಗರದ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಬ್ರಹ್ಮಕುಮಾರೀಸ್ ದಾವಣಗೆರೆ ವಿಭಾಗ 50ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ, ದೇಶವನ್ನು ರಾಮ ರಾಜ್ಯವನ್ನಾಗಿಸಲು ಮಹಾತ್ಮ ಗಾಂಧೀಜಿ ಸಹ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಬ್ರಿಟಿಷರಿಂದ ಮುಕ್ತಿ ಹೊಂದಿ ದೇಶವೇನೋ ಸ್ವಾತಂತ್ರ್ಯ ಪಡೆಯಿತು. ಆದರೆ, ಭಾರತವು ರಾಮರಾಜ್ಯ ಮಾತ್ರ ಆಗಲಿಲ್ಲವೆಂಬ ಕಾರಣಕ್ಕೆ ಗಾಂಧೀಜಿ ಹತಾಶರಾದರು. ದೇಶವನ್ನು ರಾಮ ರಾಜ್ಯ ಮಾಡಲು ಬಾಪೂಜಿ ಅವತಾರದಲ್ಲಿ ಪರಮಾತ್ಮನೇ ಧರೆಗೆ ಬಂದಿದ್ದನು ಎಂದರು.
ರಾಜಸ್ಥಾನದ ಅಭು ಪರ್ವತದ ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಸುದೇಶ್ ದೀದಿ ಮಾತನಾಡಿ, ಪರಮಾತ್ಮ ಕಣ್ಣಿಗೆ ಕಾಣದಿರಬಹುದು. ಆದರೆ, ಆತನ ಇರುವಿಕೆಯಂತೂ ಸತ್ಯ. ಮನುಷ್ಯನ ಮನಸ್ಸು ಸಾತ್ವಿಕವಾಗಲು ಧ್ಯಾನ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಪರಮಾತ್ಮನನ್ನು ಆತ್ಮದಲ್ಲಿ ಕಾಣಬಹುದು. ದಾವಣಗೆರೆಯೆಂದರೆ ದೇವನಗರಿ. ಇಲ್ಲಿ ದೇವತೆಗಳು ನೆಲೆಸಿದ್ದಾರೆನಿಸುತ್ತದೆ. ಇಂತಹ ಊರಿನಲ್ಲಿ ನಮ್ಮ ಸಂಸ್ಥೆಯ ಕೇಂದ್ರ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸಂತಸ ಮೂಡಿಸುತ್ತಿದೆ ಎಂದರು.
ಸಂಸ್ಥೆಯ ಹುಬ್ಬಳ್ಳಿ ವಲಯ ನಿರ್ದೇಶಕ ಡಾ.ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸಿದ್ದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಜೆಡಿಎಸ್ ಮುಖಂಡ ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಬಿಜೆಪಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಹಿರಿಯ ಜವಳಿ ವರ್ತಕ ಬಿ.ಸಿ. ಉಮಾಪತಿ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ, ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಬ್ರಹ್ಮಕುಮಾರ ಏಕಬೋಟೆ ಮಂಜುನಾಥ ಇತರರು ಇದ್ದರು.
- - -
ಶಾಂತಿ ಇರುವ ಕಡೆಗಳಲ್ಲಿ ಯುದ್ಧಗಳಾಗುವುದಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಹೇಳಿದ ಶಾಂತಿಯನ್ನೇ ಬ್ರಹ್ಮಕುಮಾರೀಸ್ ಸಂಸ್ಥೆಯೂ ಬೋಧಿಸುತ್ತದೆ. ಇಂತಹ ಶಾಂತಿ ಧಾಮಗಳು ಎಲ್ಲಾ ಕಡೆಗೂ ಅತ್ಯಗತ್ಯವಾಗಿ ಬೇಕಾಗಿವೆ. ಹಾಗಾಗಿ, ಮಾಯಕೊಂಡದಲ್ಲೂ ಬ್ರಹ್ಮಕುಮಾರೀಸ್ ಕೇಂದ್ರವನ್ನು ತೆರೆದರೆ ನನ್ನ ಶಾಸಕರ ಯೋಜನೆಯಲ್ಲಿ ಅನುದಾನ ನೀಡುವ ಮೂಲಕ ಸ್ಪಂದಿಸುವೆ.
- - -
ದಾವಣಗೆರೆಯಲ್ಲಿ ಭಾನುವಾರ ಬ್ರಹ್ಮಕುಮಾರೀಸ್ ಸಂಸ್ಥೆ ಸುವರ್ಣ ಮಹೋತ್ಸವ ಸಮಾರಂಭವನ್ನು ರಾಜಸ್ಥಾನದ ಅಬು ಪರ್ವದ ಬ್ರಹ್ಮಕುಮಾರೀಸ್ ಮಹಿಳಾ ವಿಭಾಗ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಕುಮಾರಿ ಚಕ್ರಧಾರಿ ದೀದಿ ಉದ್ಘಾಟಿಸಿದರು.