ಕನ್ನಡಪ್ರಭ ವಾರ್ತೆ ಕುಶಾಲನಗರ ಗಾಂಧೀಜಿ ಅವರ ತತ್ವ ಸಿದ್ಧಾಂತಗಳು ಸಾರ್ವಕಾಲಿಕವಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಕ್ಯೂ ಎ ಸಿ ಗಾಂಧಿ ಅಧ್ಯಯನ ಪೀಠ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಾಂಧೀಜಿಯವರ ಆತ್ಮಕಥೆ ನೂರರ ಸಂಭ್ರಮ ಗಾಂಧಿ ಸ್ಮಾರಕ ನಿಧಿ ಮತ್ತು ಭೂದಾನ ಚಳುವಳಿಯ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಒಂದು ದಿನದ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಮತ್ತು ಸಮಕಾಲಿನ ಪ್ರಸ್ತುತತೆ ಬಗ್ಗೆ ಮಾತನಾಡಿದ ಅವರು ಗಾಂಧೀಜಿಯವರ ಚಿಂತನೆಗಳು ಎಂದೆಂದಿಗಿಂತ ಇಂದಿನ ದಿನಗಳಲ್ಲಿ ಪ್ರಸ್ತುತವಾಗಿವೆ ಎಂದ ಅವರು ಗಾಂಧಿ ಮತ್ತು ಬಸವಣ್ಣ ವಿಚಾರಗಳ ಹೋಲಿಕೆ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಗಾಂಧೀಜಿ ಅವರ ಸತ್ಯಾನ್ವೇಷಣೆ ಸತ್ಯ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದ ಅಶೋಕ ಸಂಗಪ್ಪ ಆಲೂರ ಅವರು ಈ ಮೂಲಕ ಗಾಂಧೀಜಿಯವರ ಕನಸಿನ ಭಾರತವನ್ನು ನನಸಾಗಿಸಲು ಸಾಧ್ಯ ಎಂದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮ ಅಧಿಕಾರಿ ಡಾ ಅಬಿದ ಬೇಗಮ್ ಅವರು ಮಾತನಾಡಿ, ಗಾಂಧಿ ಸ್ಮಾರಕ ನಿಧಿ ಮೂಲಕ ರಾಜ್ಯದ ಎಲ್ಲೆಡೆ ಗಾಂಧೀಜಿ ವಿಚಾರಗಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಪುಟ್ಟರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳು ಹಾಗೂ ಗಾಂಧಿ ಅಧ್ಯಯನ ಪೀಠದ ಸಂಯೋಜಕರಾದ ಆಯೀಶ ಸಿದ್ದಿಖ ಕೆ ಎಚ್, ಐಕ್ಯೂಎಸಿ ಸಂಚಾಲಕರಾದ ಡಾ ಮಧುಶ್ರೀ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ನಮಿತಾ, ಡಾ ಬಿ ಕೆ ಕುಮಾರ್ ಮತ್ತಿತರರು ಇದ್ದರು.