ಗಾಂಧೀಜಿ ಜೀವನವೇ ಅತ್ಯಮೂಲ್ಯ ಸಂದೇಶ: ಕಾಂತೇಶ ಅಂಬಿಗೇರ

KannadaprabhaNewsNetwork |  
Published : Jan 31, 2025, 12:48 AM IST
ಹಾವೇರಿ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಸೌಹಾರ್ದ ಕರ್ನಾಟಕ ಹಾವೇರಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹುತಾತ್ಮ ದಿನದ ಸ್ಮರಣಾರ್ಥವಾಗಿ ಬೀದಿ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಹಾವೇರಿ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಸೌಹಾರ್ದ ಕರ್ನಾಟಕ ಹಾವೇರಿ ವತಿಯಿಂದ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನದ ಸ್ಮರಣಾರ್ಥವಾಗಿ ಬೀದಿ ಕವಿಗೋಷ್ಠಿ ಆಯೋಜಿಸಲಾಗಿತ್ತು.

ಹಾವೇರಿ: ಗಾಂಧೀಜಿ ಕೇವಲ ಉಪದೇಶ ಮಾಡದೇ ಸತ್ಯ, ಅಹಿಂಸೆಯ ದಾರಿಯಲ್ಲಿ ಮೌಲ್ಯಯುತ ಜೀವನವನ್ನು ಸಾಧಿಸಿದರು. ಅವರ ಜೀವನವೇ ಅತ್ಯಮೂಲ್ಯ ಸಂದೇಶವಾಗಿದೆ. ಮನುಕುಲದ ದಾರ್ಶನಿಕರಾದ ಗಾಂಧೀಜಿ ಸದಾ ವಿಸ್ಮಯವಾಗಿಯೇ ಕಾಣುತ್ತಾರೆ ಎಂದು ಸಾಹಿತಿ ಕಾಂತೇಶ ಅಂಬಿಗೇರ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಸೌಹಾರ್ದ ಕರ್ನಾಟಕ ಹಾವೇರಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ ಹುತಾತ್ಮ ದಿನದ ಸ್ಮರಣಾರ್ಥವಾಗಿ ಬೀದಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕವಿತೆ ವಾಚಿಸಿ ಮಾತನಾಡಿದರು. ಇತರರ ಖುಷಿಯಲ್ಲಿ ನಮ್ಮ ಖುಷಿ ಕಾಣಬೇಕು. ಯಾವುದೇ ವೃತ್ತಿಯಾಗಲಿ ಕನಿಷ್ಠ ಎಂಬುದಿಲ್ಲ, ಎಲ್ಲವೂ ಶ್ರೇಷ್ಠ ಹಾಗೂ ಕರಕುಶಲತೆಯು ಎಲ್ಲ ಕಾರ್ಯಕ್ಕಿಂತ ಪರಮಶ್ರೇಷ್ಠವಾದುದು ಎಂಬ ಗಾಂಧೀಜಿ ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ಬೀದಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಸಂದೇಶದಂತೆ ಪ್ರಸ್ತುತ ವಿದ್ಯಾರ್ಥಿ, ಯುವಜನರು ತಮ್ಮ ಬದುಕಿನಲ್ಲಿ ಶಾಂತಿ, ಸೌಹಾರ್ದ, ಸಹಬಾಳ್ವೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾಗಿ ಹುತಾತ್ಮರಾದ ಗಾಂಧೀಜಿ ಸ್ಮರಣೆಯ ಈ ದಿನದಂದು ಎಲ್ಲ ರೀತಿಯ ಹಿಂಸೆ ಮತ್ತು ದ್ವೇಷಾತ್ಮಕ ಕೃತ್ಯಗಳನ್ನು ಖಂಡಿಸುವ ಜತೆಯಲ್ಲಿ ಸಹಿಷ್ಣುತೆ ಹಾಗೂ ಸಮಾನತೆಗಳನ್ನು ಒಂದಾಗಿಸಿಕೊಂಡ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಪಣ ತೊಡಬೇಕು ಎಂದು ಕರೆ ನೀಡಿದರು.

ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹುತಾತ್ಮ ದಿನದ ಸಂಕಲ್ಪ ಬೋಧಿಸಿ ಮಾತನಾಡಿ, ಮಾನವಕುಲಕ್ಕೆ ಕಂಟಕವಾಗಿರುವ ಎಲ್ಲ ತರಹದ ಧಾರ್ಮಿಕ ಮೂಲಭೂತವಾದವನ್ನು ಕೊನೆಗಾಣಿಸಬೇಕು. ಭಾರತದ ಅಂತಃಸತ್ವವಾದ ಬಹುತ್ವ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಮಾಡಬೇಕಿದೆ ಎಂದರು.

ಸಾಮರಸ್ಯ, ಸೌಹಾರ್ದತೆ, ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಗಟ್ಟಿಗೊಳಿಸಲು ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸುವ ಜತೆಯಲ್ಲಿ ಸಂವಿಧಾನಾತ್ಮಕ ಆಶಯಗಳ ಅನುಷ್ಠಾನಕ್ಕೆ ಬದ್ಧತೆಯಿಂದ ಪ್ರತಿಯೋರ್ವರೂ ಶ್ರಮಿಸಬೇಕು ಎಂದರು.

ಬೀದಿ ಕವಿಗೋಷ್ಠಿಯಲ್ಲಿ ನೇತ್ರಾ ಅಂಗಡಿ, ಜುಬೇದಾ ನಾಯಕ, ನಾರಾಯಣ ಕಾಳೆ, ಎ.ಎಂ. ಪಟವೇಗಾರ, ಗಂಗಯ್ಯ ಕುಲಕರ್ಣಿ, ರುದ್ರೇಶ ಮೊಟೆಬೆನ್ನೂರು, ಬಿ.ಡಿ. ನಾಯಕ, ಶಶಿಕಲಾ ಕಛಿವೇರ, ಧನುಷ್ ದೊಡ್ಮನಿ ಇತರರು ಗಾಂಧೀಜಿ ಕುರಿತು ಚನ್ನವೀರ ಕಣವಿ, ಡಿಎಸ್ ಕಣವಿ ಸೇರಿದಂತೆ ಹಿರಿಯ ಕವಿಗಳು ಬರೆದ ಕವಿತೆಗಳನ್ನು ವಾಚಿಸಿದರು.

ಕಲಾವಿದ ಶಂಕರ ತುಮ್ಮಣ್ಣನವರ ''ದಾರಿ ಯಾವುದಯ್ಯ'' ನಾಟಕವನ್ನು ಏಕಪಾತ್ರಾಭಿನಯದ ಮೂಲಕ ಪ್ರಸ್ತುತಪಡಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ತಿಪ್ಪಣ್ಣ ಕೂಲಿ, ನಿವೃತ್ತ ಸೈನಿಕ ಸಂಘಟನೆಯ ಜಿಲ್ಲಾ ಮುಖಂಡರಾದ ಶ್ರೀನಿವಾಸ ಯರೇಶಿಮಿ, ಕೆಎಸ್.ಡಿಸಿಎಫ್ ಮುಖಂಡ ಖಲಂದರ್ ಅಲ್ಲಿಗೌಡ್ರ, ಮಲ್ಲೇಶ ಗೌರಕ್ಕನವರ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ