ಕೊಪ್ಪಳ: ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆ ತೋಟಗಾರಿಕೆ ಕ್ಷೇತ್ರದಲ್ಲಿ ಅತ್ಯಮೂಲ್ಯ ಬದಲಾವಣೆ ಕಾಣುತ್ತಿದೆ ಎಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷರೂ ಆಗಿರುವ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಶಿವರಾತ್ರಿ ಪ್ರಯುಕ್ತ ಫೆ. 16ರ ವರೆಗೆ ಏರ್ಪಡಿಸಲಾಗಿರುವ ವಿವಿಧ ಹಣ್ಣುಗಳು, ಜೇನು ಹಾಗೂ ಅಣಬೆ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಜಿಲ್ಲೆ ತೋಟಗಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಇದಕ್ಕೆ ಕಾರಣ ರೈತರು. ಮಾವಿನ ಹಣ್ಣು, ಬಾಳೆ, ದ್ರಾಕ್ಷಿ, ಪೇರಲ, ಪಪ್ಪಾಯ ಸೇರಿದಂತೆ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಣಬೆ, ಜೇನು ಕೃಷಿಯಲ್ಲಿಯೂ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಮಾರುಕಟ್ಟೆ ಒದಗಿಸುವ ಕೆಲಸವಾಗುತ್ತಿದೆ. ವಿಶೇಷವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಹಾಗಾಗಿ ಬೇರೆ ಬೇರೆ ಭಾಗಗಳಲ್ಲಿ ಬೆಳೆಯುವ ವಿವಿಧ ತಳಿಯ ಹಣ್ಣುಗಳನ್ನು ಪ್ರಸ್ತುತ ನಮ್ಮ ಜಿಲ್ಲೆಯಲ್ಲೂ ಬೆಳೆಯಲಾಗುತ್ತಿದೆ ಎಂದರು.

ಕನಕಗಿರಿಗೆ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಮಂಜೂರಾಗಿದ್ದು, ಇದರಿಂದ ನಮ್ಮ ಜಿಲ್ಲೆಯ ಉತ್ಪನ್ನಗಳನ್ನು ದೇಶ, ವಿದೇಶಗಳಲ್ಲಿ ಮಾರಾಟ ಮಾಡಲು ಎಲ್ಲ ರೈತರಿಗೆ ಅನುಕೂಲವಾಗಲಿದೆ ಎಂದರು.

ಅಣಬೆ ಪ್ರದರ್ಶನ: ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಈ ವರ್ಷ ಅಣಬೆ ಮೇಳ ವಿಶೇಷ. ಅಣಬೆ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜಗತ್ತಿನ ದುಬಾರಿ ಅಣಬೆ ಯರ್ಸಗುಂಬ ಅಣಬೆ, ಇದರ ಬೆಲೆ ಒಂದು ಕೆಜಿಗೆ ₹15 ಲಕ್ಷ ಆಗಿದ್ದು, ಇದನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಅಣಬೆ ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ ಎಂದರು.


ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಕೊಪ್ಪಳ ತಾಲೂಕು ಅಧ್ಯಕ್ಷ ಬಾಲಚಂದ್ರನ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಲಿಂಗಣ್ಣವರ, ಸಂತೋಷ ಧರಣ, ದುರ್ಗಾಪ್ರಸಾದ, ಲಿಂಗನಗೌಡ, ಶಿವಯೋಗಪ್ಪ ಹಾಗೂ ಯೋಗೇಶ್ವರ ಉಪಸ್ಥಿತರಿದ್ದರು.

ಕೈಪಿಡಿ ಬಿಡುಗಡೆ: ತೋಟಗಾರಿಕೆ ಇಲಾಖೆಯಿಂದ ಸಿದ್ಧಪಡಿಸಲಾದ ಅಣಬೆ ಕುರಿತು ಸಮಗ್ರ ಮಾಹಿತಿಯನ್ನೊಳಗೊಂಡ ಕಿರು ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಗತ್ತಿನ ದುಬಾರಿ ಅಣಬೆಯಾಗಿರುವ ಯರ್ಸಗುಂಬ ಅಣಬೆ ಪ್ರದರ್ಶನಕ್ಕೆ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಅಣಬೆ ನೋಡಲು ಜನರು ಆಗಮಿಸುತ್ತಿದ್ದಾರೆ. ಇದರೊಂದಿಗೆ ವಿವಿಧ ವಿದೇಶಿ ಹಣ್ಣಿನ ತಳಿಯ ಹಣ್ಣುಗಳು, ಸ್ವದೇಶಿ ಹಾಗೂ ಜಿಲ್ಲೆಯ ರೈತರು ಬೆಳೆದ ಪಪ್ಪಾಯ, ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ, ಪೇರಲ, ಅಂಜೂರ, ಹಲಸು, ಬಾಳೆ, ಸಪೋಟ ಹಾಗೂ ಅಣಬೆ, ಜೇನು ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಸಹ ಪ್ರದರ್ಶನದಲ್ಲಿ ಇದೆ. 5 ದಿನಗಳ ಕಾಲ ಕೊಪ್ಪಳ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆಯುವ ಈ ಮೇಳದಲ್ಲಿ ಸಾರ್ವಜನಿಕರು ಪಾಲ್ಗೊಂಡು ತಾಜಾ ಹಣ್ಣುಗಳನ್ನು ರೈತರಿಂದ ನೇರವಾಗಿ ಖರಿದೀಸಿ, ರೈತರನ್ನು ಪ್ರೋತ್ಸಾಹಿಸಬೇಕು ಎಂದು ಎಲ್ಲ ಕೊಪ್ಪಳ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೆಶಕ ಕೃಷ್ಣ ಉಕ್ಕುಂದ ಮನವಿ ಮಾಡಿದ್ದಾರೆ.