ಗಾಂಧೀಜಿ ಹೋರಾಟಗಾಥೆ ಅನುಕರಣೀಯ: ಅಮ್ಜಾದ್ ಪಟೇಲ್

KannadaprabhaNewsNetwork | Published : Oct 3, 2024 1:16 AM

ಸಾರಾಂಶ

ಸತ್ಯ, ಶಾಂತಿ, ಅಹಿಂಸೆಯ ತತ್ವಗಳಿಂದ ಬ್ರಿಟಿಷರನ್ನು ಎದುರಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೋರಾಟಗಾಥೆಯು ಅನುಕರಣೀಯ.

ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜಯಂತ್ಯುತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸತ್ಯ, ಶಾಂತಿ, ಅಹಿಂಸೆಯ ತತ್ವಗಳಿಂದ ಬ್ರಿಟಿಷರನ್ನು ಎದುರಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೋರಾಟಗಾಥೆಯು ಅನುಕರಣೀಯ ಎಂದು ನಗರಸಭೆಯ ಅಧ್ಯಕ್ಷ ಅಮ್ಜಾದ್ ಪಟೇಲ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಪಂ, ನಗರಸಭೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಗ್ರಂಥಾಲಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಸಕ್ರಿಯವಾಗಿ ಭಾಗಿಯಾದರು. ಎಲ್ಲ ಧರ್ಮಿಯರನ್ನು ಒಗ್ಗೂಡಿಸಿ ಹೋರಾಟ ಮಾಡುತ್ತಾ ಭಾರತೀಯರಾದ ನಾವೆಲ್ಲರೂ ಒಂದು ಎನ್ನುವ ಸಂದೇಶವನ್ನು ಜನತೆಗೆ ರವಾನಿಸಿದರು ಎಂದರು.

ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಸಹ ಈ ದೇಶ ಕಂಡ ಮಹಾನ್ ನಾಯಕರಾಗಿದ್ದಾರೆ. ಅಪ್ರತಿಮ ಆಡಳಿತಗಾರರಾಗಿದ್ದಾರೆ. ಬಡವರಾಗಿದ್ದ ಶಾಸ್ತ್ರೀಜಿ ಅತ್ಯುನ್ನತ ಹುದ್ದೆಯಲ್ಲಿದ್ದರು ಸಹ ಅತ್ಯಂತ ಸರಳತೆಯಿಂದ ಬದುಕಿ ನಮಗೆ ಮಾದರಿಯಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಒಳ್ಳೆಯ ಓದುಗರಾಗಿದ್ದರು. ಬರೆಯುತ್ತಿದ್ದರು. ಪತ್ರಕರ್ತರಾಗಿದ್ದರು. ಪ್ರತಿ ದಿನ ನಡೆಯುತ್ತಿದ್ದರು. ಶ್ರಮದಾನ ಮಾಡುತ್ತಿದ್ದರು. ಸತ್ಯ ಮತ್ತು ಅಹಿಂಸೆಯ ತತ್ವ ಪಾಲನೆ ಮಾಡಿದರು. ಬದುಕಿನಲ್ಲಿ ಸರಳತೆ ರೂಢಿಸಿಕೊಂಡಿದ್ದರು. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಗಾಂಧೀಜಿ ಜೀವನ ಮೌಲ್ಯಗಳು ವಿದ್ಯಾರ್ಥಿ, ಯುವಜನರಿಗೆ ಮಾದರಿಯಾಗಿವೆ. ಅವರು ಹೇಳಿದಂತೆ ಸತ್ಯ ಮತ್ತು ಶುಚಿತ್ವದತ್ತ ಹೆಜ್ಜೆ ಹಾಕೋಣ ಎಂದರು.

ಹಿರಿಯ ಲೇಖಕಿ ಸಾವಿತ್ರಿ ಮುಜುಮದಾರ ವಿಶೇಷ ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಗದೀಶ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮಾರಬನಳ್ಳಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ ಕೋಕರೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯದ ಹಾಗೂ ನಗರದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಗಣ್ಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು ಇದ್ದರು.

ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ:ಗಾಂಧಿ ಜಯಂತಿ ನಿಮಿತ್ತ ವಾರ್ತಾ ಇಲಾಖೆಯು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು.

ನಗರದ ಐಸಿಎಸ್‌ಇ ಎಸ್‌ಎಫ್‌ಎಸ್ ಶಾಲೆಯ ವಿದ್ಯಾರ್ಥಿಗಳು ಗಾಂಧೀಜಿ ನಡೆಯ ಮೇಲೆ ನೃತ್ಯ ಪ್ರದರ್ಶಿಸಿದರು.

Share this article