ಶಿವಮೊಗ್ಗ ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ವೈಭವ

KannadaprabhaNewsNetwork |  
Published : Aug 29, 2025, 01:00 AM IST
ಪೋಟೋ: 28ಎಸ್‌ಎಂಜಿಕೆಪಿ5ಶಿವಮೊಗ್ಗ ನಗರದ ಪ್ರತಿಷ್ಠಾಪಿಸಿರುವ ಹಿಂದುಮಹಾಸಭಾ ಗಣಪತಿ ಮೂರ್ತಿ. | Kannada Prabha

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮಳೆಯ ನಡುವೆಯೂ ಗಣೇಶ ಚತುರ್ಥಿಯನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಹೆಚ್ಚಿನ ಸಂಖ್ಯೆಯ ಗಣೇಶ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆಗೆ ಒಲವು ತೋರಿಸಿವೆ. ಬುಧವಾರ ಬೆಳಿಗ್ಗೆಯಿಂದಲೇ ಮಳೆ ಆರಂಭಗೊಂಡಿತ್ತು. ಮಳೆಯನ್ನೂ ಲೆಕ್ಕಿಸದ ಯುವಕ ತಂಡ ಮೂರ್ತಿಗಳನ್ನು ವಾಹನಗಳಲ್ಲಿ ಕೊಂಡೊಯುತ್ತಿದ್ದ ದೃಶ್ಯ ಕಂಡು ಬಂತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮಳೆಯ ನಡುವೆಯೂ ಗಣೇಶ ಚತುರ್ಥಿಯನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಹೆಚ್ಚಿನ ಸಂಖ್ಯೆಯ ಗಣೇಶ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆಗೆ ಒಲವು ತೋರಿಸಿವೆ. ಬುಧವಾರ ಬೆಳಿಗ್ಗೆಯಿಂದಲೇ ಮಳೆ ಆರಂಭಗೊಂಡಿತ್ತು. ಮಳೆಯನ್ನೂ ಲೆಕ್ಕಿಸದ ಯುವಕ ತಂಡ ಮೂರ್ತಿಗಳನ್ನು ವಾಹನಗಳಲ್ಲಿ ಕೊಂಡೊಯುತ್ತಿದ್ದ ದೃಶ್ಯ ಕಂಡು ಬಂತು. ಚಿಕ್ಕ ಗಾತ್ರದ ಮೂರ್ತಿ, ಆಳೆತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಷ್ಠಾಪನೆಗೆ ಮುನ್ನ ಹೋಮ–ಹವನ ಮಾಡಲಾಯಿತು. ಗಣಪತಿ ಬೊಪ್ಪ ಮೋರಯಾ ಘೋಷಣೆಗಳು ಕೇಳಿ ಬಂದವು. ಕಡಬು, ಲಾಡು, ಕರ್ಚಿ ಕಾಯಿ, ಹೋಳಿಗೆ ತಯಾರಿಸಿ ಅರ್ಪಿಸಲಾಯಿತು.

ವಿವಿಧ ಭಂಗಿಯ ಮೂರ್ತಿಗಳು:

ಗಣೇಶೋತ್ಸವದ ಅಂಗವಾಗಿ ನಗರ ಸೇರಿ ಜಿಲ್ಲೆಯಲ್ಲಿ ವಿವಿಧ ಭಂಗಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಒಂದೇ ಬಡಾವಣೆಯ ಮೂರ್ನಾಲ್ಕು ಕಡೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಮೊದಲ ಬಾರಿಗೆ ಆರ್‌ಸಿಬಿ ತಂಡ ಐಪಿಎಲ್‌ ಕಪ್‌ ಗೆದ್ದ ಹಿನ್ನೆಲೆ ನಗರದ ಜೈಲ್‌ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಯುವಕರ ಬಳಗದಿಂದ ಪ್ರತಿಷ್ಠಾಪಿಸಿರುವ ಆರ್‌ಸಿಬಿ ಜರ್ಸಿ ತೊಟ್ಟು ಎರಡು ಕೈಯಲ್ಲಿ ಐಪಿಎಲ್‌ ಕಪ್‌ ಎತ್ತಿ ಹಿಡಿದಿರುವ ಭಂಗಿಯಲ್ಲಿರುವ ಗಣಪತಿ ಮೂರ್ತಿ ಹಾಗೂ ಎಪಿಎಂಸಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಕೇಲೋ ಇಂಡಿಯಾ ಗಣಪತಿ ಎಲ್ಲರ ಗಮನ ಸೆಳೆಯುತ್ತಿವೆ.

ಮಲವಗೊಪ್ಪದ ಮೂರನೇ ತಿರುವಿನಲ್ಲಿ ಓಂ ಶ್ರೀ ಯುವಕರ ವಿದ್ಯಾ ಗಣಪತಿ ಸಂಘದವತಿಯಿಂದ ಪ್ರತಿಷ್ಠಾಪಿಸಲಾಗಿರುವ ತಂದೆ ಈಶ್ವರನ ಜೊತೆಗೆ ಭುವಿಗಿಳಿದು ಬಂದ ಗಣಪ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉಳಿದಂತೆ ಅಯೋಧ್ಯೆ ರಾಮ ಗಣಪತಿ, ನವಿಲು ಗಣಪತಿ, ಶ್ರೀರಾಮ ಗಣಪತಿ, ಸುಖಾಸಿನ ಗಣಪತಿ, ಕೃಷ್ಣಾ ಗಣಪತಿ, ಪಾರ್ವತಿ ಪರಮೇಶ್ವರ ಗಣಪತಿ, ಮಹಾರಾಜ ಗಣಪತಿ, ಗೋವು ಗಣಪತಿ ಹೀಗೆ ವಿವಿಧ ರೀತಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಆಕರ್ಷಕ ಅಲಂಕಾರ:

ಹೂಗಳಿಂದ ಅಲಂಕಾರ ಮಾಡಲಾಗಿದೆ. ಕೆಲವು ಬಡಾವಣೆಗಳಲ್ಲಿ ರಸ್ತೆಗಳಲ್ಲಿ ವಿದ್ಯುತ್‌ ದೀಪ ಅಲಂಕಾರ ಮಾಡಿದ್ದು, ಸಾರ್ವಜನಿಕರನ್ನು ಸೆಳೆಯುತ್ತಿದೆ.

ಬುಧವಾರ ಬೆಳಿಗ್ಗೆ ಮತ್ತು ಸಂಜೆ ಗಣೇಶ ಪೂಜೆ ಮಾಡಲಾಯಿತು. ಗಂಗಾಸ್ನಾನ, ವಸ್ತ್ರಧಾರಣೆ, ದೀಪರಾಧನೆ, ಅಭಿಷೇಕ, ಪಂಚಾಮೃತ, ಪ್ರಸಾದ, ಐದು ತರದ ಹಣ್ಣು ಇಟ್ಟು ಪೂಜೆಯ ನಂತರ ಮಹಾಮಂಗಲ ಆರತಿ ಮಾಡಲಾಯಿತು.

ಅನೇಕ ಕಡೆ ಮನೆಗಳಲ್ಲಿ ಬೆಳಿಗ್ಗೆ ಗಣೇಶನ ಚಿಕ್ಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಸಂಜೆಯೇ ಮೂರ್ತಿ ವಿಸರ್ಜನೆ ಮಾಡಲಾಯಿತು.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ