ಗೌರಿ- ಗಣೇಶನನ್ನು ಕರೆತರಲು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಾನುವಾರ ಪೂರ್ವಸಿದ್ಧತೆ
ಕನ್ನಡಪ್ರಭ ವಾರ್ತೆ ಮೈಸೂರು
ಬೆಲೆ ಏರಿಕೆ ನಡುವೆ ಗೌರಿ- ಗಣೇಶ ಹಬ್ಬಕ್ಕೆ ಅಗತ್ಯು ವಸ್ತುಗಳ ಖರೀದಿಯು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಜೋರಾಗಿತ್ತು.
ಈ ಬಾರಿ ತಾಯಿ ಸ್ವರ್ಣಗೌರಿ ವ್ರತ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದ್ದು, ಸೆ.14 ರಂದು ಗೌರಿ ಪೂಜೆ ಬಳಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಧಾರ್ಮಿಕ ವಿಧಿ, ವಿಧಾನ ಆಚರಿಸಲಾಗುತ್ತಿದೆ. ಗೌರಿ- ಗಣೇಶನನ್ನು ಕರೆತರಲು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಾನುವಾರ ಪೂರ್ವಸಿದ್ಧತೆ ಭರದಿಂದ ಸಾಗಿತ್ತು.
ನಗರದ ವಿವಿಧೆಡೆ ಗಣೇಶ ಮೂರ್ತಿಗಳ ವಿಭಿನ್ನವಾದ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜೆಗಳು ನಡೆಯಲಿವೆ.
ಹೂವು- ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯ ನಡುವೆಯೂ ನಗರದ ಜನತೆ ಹಬ್ಬ ಆಚರಿಸಲು ಮುಂದಾಗಿದ್ದಾರೆ. ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಚಿಕ್ಕಗಡಿಯಾರ, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ,
ದಿವಾನ್ಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಬಿರುಸಿನಿಂದ ಸಾಗಿತ್ತು. ರಸ್ತೆ ಬದಿಗಳಲ್ಲೂ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು. ತಳ್ಳುವಗಾಡಿಯಲ್ಲಿ ಹೂವು, ಹಣ್ಣು, ಬಾಳೇಕಂದು, ಮಾವಿನಸೊಪ್ಪು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಹೂವು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದಾಗ್ಯೂ ಜನರು ಖರೀದಿಯಲ್ಲಿ ಹಿಂದೆ ಬೀಳಲಿಲ್ಲ. ಮಾವಿನ ಸೊಪ್ಪು, ಬಾಳೆ ಕಂದು, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ನಗರದಲ್ಲಿ ಬಿರುಸಾಗಿತ್ತು.
ಯುವಕರು ವಿವಿಧ ಅಳತೆಯ ಗೌರಿ- ಗಣೇಶನ ಮೂರ್ತಿ ಖರೀದಿಸಿದರೆ, ಗಾಂಧಿವೃತ್ತ, ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಮೃಗಾಲಯ ರಸ್ತೆ, ಉಮಾ ಚಿತ್ರಮಂದಿರ ರಸ್ತೆ ಮೊದಲಾದ ಕಡೆಗಳಲ್ಲಿ ಮಹಿಳೆಯರು ಸೀರೆ, ಬಟ್ಟೆ ಖರೀದಿ ಜೋರಾಗಿತ್ತು.
ಹಬ್ಬದ ಹಿನ್ನೆಲೆ
ಗೌರಿ ಹಬ್ಬವು ಮದುವೆಯಾಗಿರುವ ಹೆಣ್ಣು ಮಕ್ಕಳನ್ನು ಪಾಲಕರು ತವರು ಮನೆಗೆ ಬರಮಾಡಿಕೊಳ್ಳುವ ಒಂದು ವಿಶೇಷ ಸಡಗರದ ಕ್ಷಣವಾಗಿದೆ. ಗೌರಿಪೂಜೆಯಲ್ಲಿ ಮುಖ್ಯವಾಗಿ ಸುಮಂಗಲಿಯರು ಮುಖ್ಯ ಪಾತ್ರ ವಹಿಸಿದರೂ, ಕನ್ಯೆಯರೂ ಭಾಗವಹಿಸುತ್ತಾರೆ. ಹಬ್ಬದ ಸಂದರ್ಭ ಬಾಗಿನ ವಿತರಣೆ ಸಂಪ್ರದಾಯವಾಗಿದೆ. ಮೊರದ ಬಾಗಿನದ ಜೊತೆಯಲ್ಲಿ ಫಲ ತಾಂಬೂಲ, ಗಾಜಿನ ಬಳೆ, ಕನ್ನಡಿ, ಅರಶಿಣ, ಕುಂಕುಮ, ಅಲಂಕಾರಿಕ ಸಾಮಗ್ರಿ ಮುಂತಾದವುಗಳನ್ನು ಇರಿಸಿ, ಸೌಭಾಗ್ಯದ ಸಂಕೇತವಾಗಿ ಪರಸ್ಪರ ಕೊಟ್ಟು, ತೆಗೆದುಕೊಳ್ಳುತ್ತಾರೆ.
ಪ್ರತಿವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿ) ದಿನ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಈ ಸಂದರ್ಭ ಪೂಜಿಸಲಾಗುತ್ತದೆ. ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಅರ್ಪಿಸಲಾಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.