ಪಿ.ಎಸ್. ಪಾಟೀಲ
ರೋಣ: ಗಣೇಶೋತ್ಸವ ಸಂಭ್ರಮ ಇಮ್ಮಡಿಸುವಂತೆ ತಾಲೂಕಿನ ಸಂದಿಗವಾಡದ ಮುಸ್ಲಿಂ ಯುವಕರು, ಹಿಂದೂ ಯುವಕರ ಜತೆ ಸೇರಿ ಗ್ರಾಮದ ಮಸೀದಿಯೊಳಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಣೇಶ ಹಬ್ಬವನ್ನು ಭಾವೈಕ್ಯತೆ ಹಬ್ಬವನ್ನಾಗಿ ಮಾಡಿದ್ದಾರೆ.ಬುಧವಾರ ಅದ್ಧೂರಿ ಮೆರವಣಿಗೆ ಮೂಲಕ ಸ್ವತಃ ಮುಸ್ಲಿಂ ಯುವಕರೇ ಗಣೇಶ ಮೂರ್ತಿಯನ್ನು ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಮುಸ್ಲಿಂ ಯುವಕರೆ ಪೂಜೆ, ಪ್ರಾರ್ಥನೆ ಮಾಡುತ್ತಿರುವುದು ವಿಶೇಷ . ಮುಸ್ಲಿಂ ಯುವಕರ ಜೊತೆಗೆ ಹಿಂದೂ ಯುವಕರು, ಹಿರಿಯರು ಗಣೇಶ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆ ಪಸರಿಸುತ್ತಿದ್ದಾರೆ.
ಗಣೇಶ ಮೂರ್ತಿಯನ್ನು ಕಳೆದ 3 ವರ್ಷದಿಂದ ಈ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸುತ್ತಾ ಬರಲಾಗಿದೆ. ರಂಜಾನ್, ಮೊಹರಂ, ಈದ್ ಮಿಲಾದ ಹಬ್ಬದಲ್ಲಿ ಮುಸ್ಲಿಂರೊಂದಿಗೆ ಹಿಂದೂ ಯುವಕರು, ಮುಖಂಡರು ಮಸೀದಿಯಲ್ಲಿ ನಮಾಜ್ ಮಾಡುತ್ತಾರೆ. ತನ್ಮೂಲಕ ನಮ್ಮಲ್ಲಿ ಜಾತಿ, ಧರ್ಮಗಳ ಬೇಧಭಾವವಿಲ್ಲ, ನಾವೆಲ್ಲರೂ ಒಂದೇ, ಎಲ್ಲ ಹಬ್ಬಗಳನ್ನು ಸಾಮರಸ್ಯ, ಭಾವೈಕ್ಯತೆಯಿಂದ ಆಚರಿಸುತ್ತೇವೆ ಎಂಬ ಸಂದೇಶವನ್ನು ಸಾರಿ ಹೇಳುತ್ತಿದ್ದಾರೆ ಸಂದಿಗವಾಡ ಗ್ರಾಮಸ್ಥರು.ಮುಸ್ಲಿಂರಿಂದ ಗಣೇಶ ಸ್ತೋತ್ರ: ನಿತ್ಯ ಕಾಯಿ, ಹಣ್ಣು, ಶಾವಗಿ ಪಾಯಸ ನೈವೇದ್ಯ ಮಾಡಲಾಗುತ್ತಿದೆ. ಮುಸ್ಲಿಂ ಯುವಕರೇ ಗಣೇಶ ಸ್ತೋತ್ರಗಳನ್ನು ಹೇಳುತ್ತಿರುವುದು ವಿಶೇಷ. ಅವರೇ ಭಜನಾ ಪದಗಳನ್ನು ಹಾಡುತ್ತ ಗೌರಿಸುತನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ.
ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯಾರೂ ವಿರೋಧಿಸಿಲ್ಲ. ಸ್ವತಃ ಮುಸ್ಲಿಂ ಯುವಕರಾದ ಮುನ್ನಾ ನದಫಾ, ಹಸನಸಾಬ ನದಾಫ, ದಾವಲಸಾಬ ನದಾಫ, ಲಾಡಸಾಬ ನದಾಫ ಸೇರಿದಂತೆ ಅನೇಕ ಯುವಕರು ಸೇರಿ ಗಣೇಶ ಮೂರ್ತಿಯನ್ನು ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದು ಗಮನಾರ್ಹವಾಗಿದೆ. ಹಾಗಾಗಿ ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಟ ಮಾಡುವವರಿಗೆ ಈ ಗ್ರಾಮ ಮಾದರಿಯಾಗಿದೆ.ನಮ್ಮೂರಲ್ಲಿ ಹಬ್ಬ, ಜಾತ್ರೆ, ಉತ್ಸವಗಳ ಆಚರಣೆಗೆ ಜಾತಿಭೇದವಿಲ್ಲ. ಊರೆಂದರೆ ಒಂದೇ ಮನೆಯವರಂತೆ ಎಲ್ಲರೂ ಒಂದುಗೂಡಿ ಹಬ್ಬ ಆಚರಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ರಾಜೇಸಾಬ ಗಂಗೂರ ಭಜನೆ: ಶ್ರಾವಣ ಮಾಸದಲ್ಲಿ ತಿಂಗಳಪೂರ್ತಿ ಜರುಗುವ ಭಜನಾ ಕೈಂಕರ್ಯದಲ್ಲಿ ರಾಜೇಸಾಬ ಗಂಗೂರ ಎಂಬ ಮುಸ್ಲಿಂ ಯುವಕ ತಬಲಾ ಬಾರಿಸುತ್ತಾ ಭಕ್ತಿಗೀತೆಗಳನ್ನು ಹಾಡುತ್ತಾ ಬಂದಿದ್ದಾನೆ. ದೀಪಾವಳಿ, ದಸರಾ, ಯುಗಾದಿ, ಮೊಹರಂ, ರಂಜಾನ್, ಈದಮಿಲಾದ, ಗಣೇಶ ಹಬ್ಬ ಹೀಗೆ ಗ್ರಾಮದಲ್ಲಿ ಜರುಗುವ ಪ್ರತಿಯೊಂದು ಹಬ್ಬ ಹರಿದಿನ, ಜಾತ್ರೆ, ಉತ್ಸವಗಳನ್ನು ಯಾವುದೇ ಜಾತಿ ಭೇದವಿಲ್ಲದೇ ಇಲ್ಲಿನ ಜನತೆ ಆಚರಿಸಿಕೊಂಡು ಬರುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.ನಮ್ಮೂರಾಗ ಹಿಂದೂ, ಮುಸ್ಲಿಂ ಎಂಬ ಜಾತಿ ಭೇದವಿಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಅಣ್ಣ ತಮ್ಮಂದಿರಂತಿದ್ದೇವೆ. ಗಣೇಶ ಹಬ್ಬವಾಗಲಿ, ದಸರಾ, ದೀಪಾವಳಿ, ಯುಗಾದಿ, ರಂಜಾನ್, ಮೊಹರಂ ಆಗಲಿ ಎಲ್ಲ ಹಬ್ಬವನ್ನು ಜಾತ್ಯತೀತವಾಗಿ ಆಚರಿಸುತ್ತೇವೆ. ಅದರಂತೆ ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಮುಸ್ಲಿಂ ಯುವಕರು ಪ್ರತಿಷ್ಠಾಪಿಸಿ, ನಿತ್ಯವೂ ಅವರೇ ಪೂಜೆ ಮಾಡುತ್ತಿದ್ದಾರೆ. ನಾವೆಲ್ಲರೂ ಮುಸ್ಲಿಂ ಯುವಕರೊಂದಿಗೆ ಗಣೇಶ ಪೂಜೆ, ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಸಂದಿಗವಾಡದ ತಿಪ್ಪನಗೌಡ ಹುಲ್ಲೂರ, ಶಿವಪ್ಪ ಜಾಲಿಹಾಳ, ನಿಂಗಪ್ಪ ಭೂಸಗೌಡ್ರ. ಹೊನ್ನಪ್ಪ ಗಾಣಿಗೇರ ಹೇಳುತ್ತಾರೆ.
ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ, ಪೂಜೆಗೆ ಗ್ರಾಮಸ್ಥರೆಲ್ಲರ ಸಹಕಾರವಿದೆ. ನಿತ್ಯವೂ ಗಣೇಶ ಪೂಜೆಯನ್ನು ನಾವೇ ಮಾಡುತ್ತೇವೆ. ಪೂಜೆಯಲ್ಲಿ ಗ್ರಾಮದ ಎಲ್ಲರೂ ಪಾಲ್ಗೊಳ್ಳುತ್ತಾರೆ. ನಮ್ಮೂರಲ್ಲಿ ಯಾವುದೇ ಜಾತಿ ಭೇದಭಾವವಿಲ್ಲ. ಎಲ್ಲ ಹಬ್ಬವನ್ನು ಒಂದಾಗಿ ಮಾಡುತ್ತಾ ಬಂದಿದ್ದೇವೆ ಎಂದು ಸಂದಿಗವಾಡ ಮುಸ್ಲಿಂ ಯುವಕರಾದ ಲಾಡಸಾಬ ನದಾಫ, ಮುನ್ನಾ ನದಾಫ, ಹಸನಸಾಬ ನದಾಫ ಹೇಳುತ್ತಾರೆ.