ಹುಬ್ಬಳ್ಳಿ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಳಿನಗರದ ಸಾರ್ವಜನಿಕರ ಶಾಂತಿ, ಸುರಕ್ಷತೆ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹು-ಧಾ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿ ಸೋಮವಾರ ರೌಡಿಶೀಟರ್ ಪರೇಡ್ ನಡೆಸಲಾಯಿತು. ಬಾಲಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಲಾಯಿತು.
ಮಹಾನಗರದ ಎಲ್ಲ ರೌಡಿಶೀಟರ್‌ಗಳ ಮೇಲೆ ನಿಗಾ ವಹಿಸಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಅಂತಹ ಚಟುವಟಿಕೆಯಲ್ಲಿ ತೊಡಗಿದ್ದರ ಬಗ್ಗೆ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ರೌಡಿ ಚಟುವಟಿಕೆ ಬಿಟ್ಟು ಮುಖ್ಯವಾಹಿನಿಗೆ ಬಂದು ಸುಧಾರಣೆಯಾಗುತ್ತೇವೆಂದು ಮನವಿ ನೀಡಿದವರ ಬಗ್ಗೆ ಪರಿಶೀಲನೆ ಸಹ ನಡೆಸಲಾಗುತ್ತಿದೆ. ಹಾಗಾಗಿ ಸನ್ನಡತೆ ಆಧಾರದ ಮೇಲೆ ಕೆಲವರ ಹೆಸರನ್ನು ರೌಡಿ ಪಟ್ಟಿಯಿಂದ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಮಹಾನಗರದಲ್ಲಿ 1700ಕ್ಕೂ ಹೆಚ್ಚು ರೌಡಿಗಳಿದ್ದು, ಕೆಲವು ವರ್ಷಗಳಿಂದ ನವೀಕರಣ ಆಗಿಲ್ಲ. ಎಲ್ಲ ರೌಡಿಗಳ ಪ್ರಸ್ತುತ ಚಟುವಟಿಕೆ ಮಾಹಿತಿ ಸಂಗ್ರಹಿಸಿ, ಗಣೇಶ ಹಬ್ಬದ ನಂತರ, ರೌಡಿಪಟ್ಟಿಯಿಂದ ಹೆಸರು ತೆಗೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಸದ್ಯ ಕೌಟುಂಬಿಕ ಕಲಹ, ಸಂಬಂಧಗಳಲ್ಲಿ ಬಿರುಕು ಉಂಟಾಗಿ ರೌಡಿಗಳಾದವರೂ ಇದ್ದಾರೆ. ರೌಡಿ ಚಟುವಟಿಕೆ ಬಿಟ್ಟು, ಸಮಾಜದ ಮುಖ್ಯವಾಹಿನಿಗೆ ಬಂದು ಸುಧಾರಣೆಯಾಗುವುದಾಗಿ ಕೆಲವು ರೌಡಿಗಳು ತಿಳಿಸಿದ್ದಾರೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದು, ಇನ್ನು ಕೆಲವರು ಹತ್ತು ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದೇ, ದುಡಿಮೆಯಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ. ಅಂಥವರ ಸಂಪೂರ್ಣ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಸೇರಿದಂತೆ ಇತರರು ಇದ್ದರು.ಗಡಿಪಾರು ಎಚ್ಚರಿಕೆ: ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬ ರೌಡಿಯ ದೈನಂದಿನ ಕಾರ್ಯ ಚಟುವಟಿಕೆ, ವಿಚಾರಣೆಗೆ ಠಾಣೆಗೆ ಹಾಜರಾಗುತ್ತಾರೋ ಇಲ್ಲವೋ, ಕೋರ್ಟ್ ಸಮನ್ಸ್ ಉಲ್ಲಂಘನೆ, ಅವರಿಗೆ ಹಣ-ವಾಹನಗಳನ್ನು ಯಾರು ನೀಡುತ್ತಾರೆ? ಅವರ ಅಪರಾಧ ಕೃತ್ಯಗಳೇನು? ಎಂದು ನಿರಂತರವಾಗಿ ಪರಿಶೀಲನೆ ನಡೆಸಲಾಗಿದೆ. ಶಾಂತಿ ಕದಡಲು ಯತ್ನಿಸಿದರೆ, ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುವ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಕಮಿಷನರ್ ಶಶಿಕುಮಾರ ತಿಳಿಸಿದರು.ರೌಡಿ ಪಟ್ಟಿ: ಹಲವು ಮಾನದಂಡ: ಪೊಲೀಸರು ರೌಡಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಪೂರ್ವದಲ್ಲಿ ಕೆಲವು ಮಾನದಂಡ ಅನುಸರಿಸಬೇಕಾಗುತ್ತದೆ. ಸಾರ್ವಜನಿಕ ಶಾಂತಿಗೆ ಭಂಗ ಮಾಡುವವರು, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಅಡ್ಡಿಯಾಗುವವರು, ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧ ಕೃತ್ಯ ಮಾಡುವವರು, ಅನುಮತಿಯಿಲ್ಲದೆ ಶಸ್ತ್ರಾಸ್ತ್ರಗಳನ್ನು ಬಳಸುವವರು, ನಿರಂತರವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವವರನ್ನು ರೌಡಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.