ಕನ್ನಡಪ್ರಭ ವಾರ್ತೆ ಅಥಣಿ
ಕಳೆದೈದು ದಿನಗಳಿಂದ ಮನೆ ಮನಗಳಲ್ಲಿ ಪೂಜಿಸಲ್ಪಟ್ಟ ವಿಘ್ನ ನಿವಾರಕನಿಗೆ 5ನೇ ದಿನವಾದ ಭಾನುವಾರ ಸಂಭ್ರಮದ ವಿದಾಯ ಹೇಳಲಾಯಿತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ನೂರಾರು ಗಣೇಶ ಮೂರ್ತಿಗಳ ಮೆರವಣಿಗೆ ನಡೆಸಿ, ನಿಗದಿತ ಸ್ಥಳದಲ್ಲಿ ವಿಸರ್ಜಿಸಲಾಯಿತು.ಅಥಣಿ ಪುರಸಭೆ ವತಿಯಿಂದ ಪುರಾತನ ಕೆರೆಗಳ ಹತ್ತಿರ ಗಣೇಶ ವಿಸರ್ಜನೆಗಾಗಿ ಪ್ರತ್ಯೇಕ ಕೃತಕ ಹೊಂಡದ ವ್ಯವಸ್ಥೆ ಮಾಡಲಾಗಿತ್ತು, ಇದಲ್ಲದೇ ಸಿದ್ಧೇಶ್ವರ ದೇವಸ್ಥಾನದ ಹತ್ತಿರವಿರುವ ಭಾಗೀರಥಿ ನಾಲಾದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ತೆರೆದ ಬಾವಿ ಹಾಗೂ ಕೆರೆಗಳಲ್ಲಿ, ನಾಲಾಗಳ ಪೂಜೆ ಸಲ್ಲಿಸಿ, ಮೂರ್ತಿಗಳನ್ನು ವಿಸರ್ಜಿಸಲಾಯಿತು. ಭಾನುವಾರ ತಡರಾತ್ರಿ ಅವರಿಗೆ ಗಣೇಶ ಮೂರ್ತಿಗಳ ವಿಸರ್ಜನೆ ಜರುಗಿತು. ಚಿಕ್ಕ ಮಕ್ಕಳು ಸುರುಸುರುಬತ್ತಿ, ಮದ್ದಿನ ಕುಳ್ಳಿ, ಪಟಾಕಿಗಳನ್ನು ಸಿಡಿಸಿ, ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ.. ಪುಂಡೆಪಲ್ಲಿ ಸೊರಯಾ.. ಘೋಷಣೆಗಳನ್ನು ಕೂಗುತ್ತ ಗಣೇಶನಿಗೆ ವಿದಾಯ ಹೇಳಿದರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.ವಿವಿಧ ಕಾರ್ಯಕ್ರಮ, ಅನ್ನ ಸಂತರ್ಪಣೆ
ಮನೆ ಮನೆಯ ಗಣೇಶ ಮೂರ್ತಿಗಳಿಗೆ ಐದನೇ ದಿನಕ್ಕೆ ವಿದಾಯ ಹೇಳಿದರೇ ಸರ್ಕಾರಿ ವಿವಿಧ ಕಚೇರಿಗಳಲ್ಲಿ, ವಿವಿಧ ಗಣೇಶ ಮಂಡಳಿಗಳು, ವಿವಿಧ ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು 7.9 ಮತ್ತು 11ನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. ಅಥಣಿ ಪಟ್ಟಣದಲ್ಲಿ 85ಕ್ಕೂ ಅಧಿಕ ವಿವಿಧ ಗಣೇಶ ಮಂಡಳಿಗಳು, 30ಕ್ಕೂ ಅಧಿಕ ಸರ್ಕಾರಿ ಕಚೇರಿಗಳಲ್ಲಿ, 50ಕ್ಕೂ ಅಧಿಕ ವಿವಿಧ ಸಂಘ ಸಂಸ್ಥೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಿವಿಧೆಡೆ ಅನ್ನಸಂತರ್ಪಣೆ ಜರುಗುತ್ತಿವೆ. 7ನೇ ದಿವಸ ಭವ್ಯ ಮೆರವಣಿಗೆ ಜೊತೆಗೆ ಗಣೇಶ ಮೂರ್ತಿ ವಿಸರ್ಜನೆಗೆ ತಾಲೂಕು ಆಡಳಿತ, ಗಣೇಶ ಮಹಾಮಂಡಲ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಪ್ರಮುಖ ಬೀದಿಯಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಗಣೇಶ ಮೂರ್ತಿಗಳು ಮೆರವಣಿಗೆ ಸಾಗುತ್ತದೆ. ಉತ್ತಮ ಮೂರ್ತಿಗಳಿಗೆ, ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಜಾದ್ ಗೆಳೆಯರ ಬಳಗ ಹಾಗೂ ಸಾರ್ವಜನಿಕ ಗಣೇಶ ಮಹಾಮಂಡಲ ವತಿಯಿಂದ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಎತ್ತರದ ಗಣೇಶ ಮೂರ್ತಿಗಳನ್ನು ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಎಲ್ಲೆಡೆಯೂ ಶಾಂತಿಯುತವಾಗಿ ಮೆರವಣಿಗೆ ನಡೆದಿದೆ. ಪ್ರತಿವರ್ಷದ ಮಾರ್ಗಗಳಲ್ಲಿಯೇ ವಿಸರ್ಜನೆ ಮೆರವಣಿಗೆ ನಡೆಯಲಿದ್ದು, ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ತಿಳಿಸಿದ್ದಾರೆ.