ಕನ್ನಡಪ್ರಭ ವಾರ್ತೆ ಕಂಪ್ಲಿ
ಗಂಗಾ ನಗರದಿಂದ ಆರಂಭಗೊಂಡ ಮೆರವಣಿಗೆ ಉದ್ಭವ ಮಹಾಗಣಪತಿ ದೇವಸ್ಥಾನದ ಮುಂಭಾಗ, ಡಾ. ರಾಜ್ ಕುಮಾರ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಅಲ್ಲಿಂದ ಮರಳಿ ರಾಜಕುಮಾರ್ ರಸ್ತೆ ಮೂಲಕ ಸಂಚರಿಸಿ ಕೊನೆಗೆ ತುಂಗಭದ್ರಾ ನದಿ ತಟದಲ್ಲಿ ಸಮಾವೇಶಗೊಂಡು ವಿಸರ್ಜನೆ ನೆರವೇರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳು:ವಿಸರ್ಜನೆ ಮೆರವಣಿಗೆಯ ಅಂಗವಾಗಿ ದೇವರ ಅಭಿಷೇಕ, ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಭಕ್ತರು ಕೈಮುಗಿದು ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಕೋಲಾಟ, ಮರಗಾಲುನಡಿಗೆ, ನಂದಿ ಕೋಲು, ಕುದುರೆ ಕುಣಿತ, ಡೊಳ್ಳು ಕುಣಿತ, ತಪ್ಪಡಿ, ತಾಷ ರಾಮ್ ಡೋಲ್, ಕಹಳೆ ಸೇರಿದಂತೆ ವಿವಿಧ ಜನಪದ ಮಂಗಳವಾದ್ಯಗಳ ಸಂಭ್ರಮ, ಉತ್ಸಾಹವನ್ನು ಹೆಚ್ಚಿಸಿತು. ಬಣ್ಣ ಬಣ್ಣದ ಅಲಂಕಾರಗಳಿಂದ ಮೆರವಣಿಗೆ ಇನ್ನಷ್ಟು ಕಂಗೊಳಿಸಿತು.
ಅಂಬೇಡ್ಕರ್ ವೃತ್ತದಿಂದ ಆರಂಭವಾದ ಧ್ವನಿವರ್ಧಕ ಸದ್ದಿಗೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಎಲ್ಲರೂ ನೃತ್ಯ ಮಾಡಿ ಸಂಭ್ರಮಿಸಿದರು. ಭಕ್ತಿಯಿಂದ ಕೂಡಿದ ಹರ್ಷೋದ್ಗಾರಗಳು ಸುತ್ತಮುತ್ತಲನ್ನು ಪ್ರಫುಲ್ಲಗೊಳಿಸಿತು.
ಈ ಮೆರವಣಿಗೆಯಲ್ಲಿ ಹಿಂದೂ ಮಹಾ ಮಂಡಳಿಯ ಪದಾಧಿಕಾರಿಗಳ ಜತೆಗೆ ಸರ್ವ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು. ಶಿಸ್ತಿನ ವಾತಾವರಣದಲ್ಲಿ ನಡೆದ ಮೆರವಣಿಗೆಯು ಪಟ್ಟಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಏಕತೆಯ ಸಂಕೇತವಾಗಿ ಪರಿಣಮಿಸಿತು.