ಜಿಲ್ಲೆಯಲ್ಲಿ ಗಣೇಶ ಉತ್ಸವ ಸಂಭ್ರಮ: ಸಿದ್ಧತೆ ಬಿರುಸು

KannadaprabhaNewsNetwork |  
Published : Sep 14, 2026, 01:45 AM IST
ಚಿತ್ರ 13ಬಿಡಿಆರ್59 | Kannada Prabha

ಸಾರಾಂಶ

ಗಣೇಶ ಹಬ್ಬದ ಆರಂಭೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಮಂಟಪಗಳ ನಿರ್ಮಾಣ, ಅಲಂಕಾರ, ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ವಿವಿಧ ಕಾರ್ಯಗಳು ಚುರುಕುಗೊಂಡಿದ್ದು, ಹಬ್ಬದ ಸಂಭ್ರಮ ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಬೀದರ್

ಗಣೇಶ ಹಬ್ಬದ ಆರಂಭೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಮಂಟಪಗಳ ನಿರ್ಮಾಣ, ಅಲಂಕಾರ, ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ವಿವಿಧ ಕಾರ್ಯಗಳು ಚುರುಕುಗೊಂಡಿದ್ದು, ಹಬ್ಬದ ಸಂಭ್ರಮ ಕಾಣುತ್ತಿದೆ.

ಐತಿಹಾಸಿಕ ಬೀದರ್ ನಗರದಲ್ಲಿ ಈ ಬಾರಿ ಗಣೇಶೋತ್ಸವವು ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ವೈಭವ, ಭಕ್ತಿ ಹಾಗೂ ಉತ್ಸಾಹದಿಂದ ನಡೆಯುತ್ತಿದ್ದು, ನಗರದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ.

ನಗರದ ಎಲ್ಲ ಸಾರ್ವಜನಿಕ ಗಣೇಶ ಮಂಡಳಿಗಳ ಉತ್ಸವದ ಜವಾಬ್ದಾರಿಯನ್ನು ಗಣೇಶ ಮಹಾಮಂಡಳ ವಹಿಸಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಯುವಕರು ಧಾರ್ಮಿಕ ಭಾವನೆ, ದೇಶಭಕ್ತಿ, ಹಿಂದೂ ಹಾಗೂ ಸನಾತನ ಸಂಸ್ಕೃತಿಯ ಸಂದೇಶಗಳನ್ನು ಬಿಂಬಿಸುವ ರೀತಿಯಲ್ಲಿ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.

ವಿಶೇಷ ಆಕರ್ಷಣೆಯ ಗಣಪತಿಗಳು: ನಗರದ ವಿವಿಧೆಡೆ ನಿರ್ಮಿಸಲಾಗಿರುವ ಗಣೇಶ ಮಂಟಪಗಳು ಈ ಬಾರಿ ವಿಶೇಷ ಆಕರ್ಷಣೆಯಾಗಿವೆ. ಬೀದರ್ ಕಾ ರಾಜ ಗಣೇಶ ಮಂಟಪವು ಅರುಣಾಚಲಂ ಮಂದಿರದ ಪ್ರತಿರೂಪವಾಗಿ, ಗಾಂಧಿಗಂಜ್ ಗಣೇಶ ಮಂಡಳಿಯ ಮಂಟಪವು ತಿರುಪತಿ ಬಾಲಾಜಿ ದೇವಸ್ಥಾನದ ಮಾದರಿಯಲ್ಲಿ, ಹಿಂದೂ ಮಹಾಗಣಪತಿ-ಕಿತ್ತೂರು ಚೆನ್ನಮ್ಮ ವ್ರತದ ಗಣಪತಿ ರಾಮ ಮಂದಿರದ ಪ್ರತಿರೂಪದಲ್ಲಿ ಮತ್ತು ಸಂಗಮೇಶ್ವರ್ ಕಾಲೋನಿಯ ಯುವ ರಾಮ ಸೇನಾ ಗಣೇಶ ಮಂಡಳವು ಹೈದರಾಬಾದ್‌ನ ಪ್ರಸಿದ್ಧ ಸ್ವರ್ಣಗಿರಿ ದೇವಸ್ಥಾನದ ಮಾದರಿಯಲ್ಲಿ ಗಮನ ಸೆಳೆಯುತ್ತಿವೆ.

ಕೆಇಬಿ ಬಳಿಯ ಹಿಂದೂ ಯುವಸೇನೆ ಕೆಬಿಯ ಗಣೇಶ ಮಂಟಪವು ಶ್ರೀರಂಗಪಟ್ಟಣಂ ಸಾಯಿ ಮಂದಿರದ ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು, ದೇವಿ ಕಾಲೋನಿ, ಹಣಮಂತ ಮಂದಿರ ರಾಮನು ಇದ್ದು ಪ್ರತಾಪನಗರ, ಶಿವಸ್ವರೂಪಿ ಗಣೇಶನಾಗಿದ್ದಾನೆ. ನೌಬಾದ ಸೇರಿದಂತೆ ನಗರದ ವಿವಿಧ ಭಾಗಗಳ ಸಾರ್ವಜನಿಕ ಗಣೇಶ ಮಂಟಪಗಳು ವಿಭಿನ್ನ ಪರಿಕಲ್ಪನೆ ಮತ್ತು ಅಲಂಕಾರಗಳಿಂದ ಭಕ್ತರ ಗಮನ ಸೆಳೆಯುತ್ತಿವೆ ಎಂದು ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ತಿಳಿಸಿದರು.

ಕಳೆದ ವರ್ಷ ಬೀದರ್ ನಗರದಲ್ಲಿ 168 ಸಾರ್ವಜನಿಕ ಗಣೇಶಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅವುಗಳಲ್ಲಿ ಸುಮಾರು 65 ಬೃಹತ್ ಗಣೇಶ ಮೂರ್ತಿಗಳಿದ್ದವು. ಈ ಬಾರಿ ಸುಮಾರು 175ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮಂಡಳಿಗಳು ಪ್ರತಿಷ್ಠಾಪನೆಗೆ ಮುಂದಾಗಿರುವ ನಿರೀಕ್ಷೆಯಿದ್ದು, ಅವುಗಳಲ್ಲಿ ಸುಮಾರು 65 ಬೃಹತ್ ಗಣೇಶಗಳು ಇರಲಿವೆ. ಪ್ರತಿಷ್ಠಾಪನೆ ಪೂರ್ಣಗೊಂಡ ಬಳಿಕ ಮಹಾಮಂಡಳ ವತಿಯಿಂದ ನಿಖರವಾದ ಅಧಿಕೃತ ಮಾಹಿತಿ ಸಿಗಲಿದೆ.

ಗಣೇಶೋತ್ಸವದ ನಡುವೆ ವಿಮೋಚನಾ ದಿನಾಚರಣೆ: ಈ ಬಾರಿ ಗಣೇಶ ಚತುರ್ಥಿಯು ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳು ತಮ್ಮ ಮಂಟಪಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಬೇಕು. ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳು ಬಾಲ್ ಗಂಗಾಧರ್ ತಿಲಕ್ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಗಳನ್ನು ತಮ್ಮ ತಮ್ಮ ಪಂಡಾಲ್‌ಗಳಲ್ಲಿ ಅಳವಡಿಸಬೇಕೆಂದು ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಮನವಿ ಮಾಡಿದ್ದಾರೆ.

ಗಣೇಶ ಉತ್ಸವದ ಸಿದ್ಧತೆಗಳ ಪರಿಶೀಲನೆ: ಗಣೇಶ ಮಹಾಮಂಡಳದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಕೆಇಬಿ, ನಗರಸಭೆ, ಅರಣ್ಯ ಇಲಾಖೆ, ಸಂಪೂರ್ಣ ಸಹಕಾರ ನೀಡುತ್ತಿದ್ದು, ಈ ಬಾರಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಅತ್ಯಂತ ವೈಭವದಿಂದ ಆಚರಿಸಲು ಎಲ್ಲ ವ್ಯವಸ್ಥೆಗಳು ಸಜ್ಜಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣಪ ಉತ್ಸವಕ್ಕೆ ಖರೀದಿ ಭರಾಟೆ ರಂಗು
ಭದ್ರಾವತಿಯಲ್ಲಿ ಗೌರಿ ಹಬ್ಬಕ್ಕೆ ಖರೀದಿ ಜೋರು