ಗಣೇಶಮೂರ್ತಿ ವಿಸರ್ಜನೆ: ಕೇಸರಿ ಶಾಲು ಧರಿಸಿದ ಮುಸ್ಲಿಮರು

KannadaprabhaNewsNetwork |  
Published : Sep 21, 2026, 01:45 AM IST
20ಕೆಎಂಎನ್ ಡಿ12,13,14,15 | Kannada Prabha

ಸಾರಾಂಶ

ಪೇಟೆ ಬೀದಿಯ ಹಜರತ್ ದೌಡ್ ತೆ ಪೀರ್ ಬಾಬಾ ದರ್ಗಾ ಮುಂದೆ ಗಣೇಶಮೂರ್ತಿ ಮೆರವಣಿಗೆ ಆಗಮಿಸಿದಾಗ ಸಾಲುಗಟ್ಟಿ ನಿಂತಿದ್ದ ಮುಸ್ಲಿಂ ಸಮುದಾಯದ ಜನರು ಸ್ವತಃ ಕೇಸರಿ ಶಾಲು ಧರಿಸಿ ಗಣೇಶ ಭಕ್ತರನ್ನು ಸ್ವಾಗತಿಸಿದರು. ಅಲ್ಲದೇ, ಗಣೇಶಮೂರ್ತಿ ಇಟ್ಟಿದ್ದ ಟ್ರ್ಯಾಕ್ಟರ್ ಮೇಲೆ ಏರಿ ಮುಸ್ಲಿಂದ ಮುಖಂಡರು ಗಣಪತಿಮೂರ್ತಿಗೆ ಭಾರೀ ಗಾತ್ರದ ಹೂವಿನ ಹಾರ ಹಾಕಿ ನಮಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಸರಿ ಶಾಲು ಧರಿಸಿ ಮುಸ್ಲಿಂ ಸಮಾಜದವರು ಗಣೇಶಮೂರ್ತಿ ವಿಸರ್ಜನಾ ಮೆರವಣಿಯನ್ನು ಸ್ವಾಗತಿಸಿ, ಸ್ವತಃ ಗಣೇಶಮೂರ್ತಿಗೆ ಭಾರೀ ಗಾತ್ರದ ಹೂವಿನ ಹಾರ ಹಾಕಿ ಟ್ರ್ಯಾಕ್ಟರ್ ಚಾಲನೆ ಮಾಡಿ ಹಿಂದೂ-ಮುಸ್ಲಿಂ ನಡುವೆ ಭಾವೈಕ್ಯತೆಗೆ ಸಾಕ಼್ಷಿಯಾದ ಘಟನೆ ನಗರದಲ್ಲಿ ಭಾನುವಾರ ಜರುಗಿತು.

ಕಳೆದ ವರ್ಷ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಗಲಭೆ ಉಂಟಾಗಿತ್ತು. ಈ ವರ್ಷ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ಕಲದೂರು ಉದಯ್ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಹಿಂದೂಗಳು‌ ಕೂರಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾದ ಮುಸ್ಲಿಂ ಸಮುದಾಯ ಜನರು ಹಿಂದೂಗಳ ಜೊತೆ ಹೆಜ್ಜೆ ಹಾಕಿ ನೃತ್ಯ ಮಾಡಿ ಗಣಪನಿಗೆ ಜೈಕಾರ ಕೂಗಿ ಸಾಮರಸ್ಯ ಮೆರೆದರು.

ಭಕ್ತರು, ಯುವ ಜನರ ಸಂಭ್ರಮಾಚರಣೆ:

ಪ್ರವಾಸಿ ಮಂದಿರ ವೃತ್ತದಿಂದ ಆರಂಭವಾದ ಗಣೇಶೋತ್ಸವದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಮಂಗಳವಾದ್ಯ, ತಮಟೆ, ಡೊಳ್ಳು ಕುಣಿತ, ಡಿಜೆಯೊಂದಿಗೆ ಭರ್ಜರಿ ಮೆರವಣಿಗೆ ನಡೆಸಲಾಯಿತು.

ನಗರದ ಪೇಟೆ ಬೀದಿ ಮಾರ್ಗವಾಗಿ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಭಕ್ತರು, ಯುವಕರು, ಬೆಂಬಲಿಗರು ಶಾಸಕ ಕೆ.ಎಂ.ಉದಯ್ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸಿದರು.

ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದರು.

ಕೇಸರಿ ಶಾಲು ಧರಿಸಿ ಮುಸ್ಲಿಂರಿಂದ ಭಕ್ತರ ಸ್ವಾಗತ:

ಪೇಟೆ ಬೀದಿಯ ಹಜರತ್ ದೌಡ್ ತೆ ಪೀರ್ ಬಾಬಾ ದರ್ಗಾ ಮುಂದೆ ಗಣೇಶಮೂರ್ತಿ ಮೆರವಣಿಗೆ ಆಗಮಿಸಿದಾಗ ಸಾಲುಗಟ್ಟಿ ನಿಂತಿದ್ದ ಮುಸ್ಲಿಂ ಸಮುದಾಯದ ಜನರು ಸ್ವತಃ ಕೇಸರಿ ಶಾಲು ಧರಿಸಿ ಗಣೇಶ ಭಕ್ತರನ್ನು ಸ್ವಾಗತಿಸಿದರು. ಅಲ್ಲದೇ, ಗಣೇಶಮೂರ್ತಿ ಇಟ್ಟಿದ್ದ ಟ್ರ್ಯಾಕ್ಟರ್ ಮೇಲೆ ಏರಿ ಮುಸ್ಲಿಂದ ಮುಖಂಡರು ಗಣಪತಿಮೂರ್ತಿಗೆ ಭಾರೀ ಗಾತ್ರದ ಹೂವಿನ ಹಾರ ಹಾಕಿ ನಮಿಸಿದರು.

ಮೆರವಣಿಗೆಯಲ್ಲಿ ಕುಣಿದು ಸುಸ್ತಾಗಿದ್ದ ಭಕ್ತರಿಗೆ, ಯುವಕರಿಗೆ ಮುಸ್ಲಿಂ ಸಮುದಾಯ ಸ್ವತಃ ನೀರು, ನಂದಿನಿ ಮಜ್ಜಿಗೆ ಪಾಕೆಟ್ ವಿತರಿಸಿ ಉಪಚರಿಸಿದರು. ಅಲ್ಲಲ್ಲಿ ಭಕ್ತರಿಗೆ ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದ ಜನರಿಗೆ ಜ್ಯೂಸ್ ನೀಡಿ ದಾಹ ನೀಗಿಸಿದರು.

ಎಲ್ಲೆಡೆ ಪೊಲೀಸರ ಸರ್ಪಗಾವಲು:

ನಗರದಲ್ಲಿ ಆಯೋಜಿಸಿದ್ದ ಬೃಹತ್ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದಲ್ಲಿ ಎಲ್ಲೆಡೆ ಪೋಲೀಸ್ ಸರ್ಪಗಾವಲು ಹಾಕಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ 1 ಎಎಸ್ಪಿ‌, 2 ಡಿವೈಎಸ್ಪಿ, 12 ಇನ್ಸ್ ಪೆಕ್ಟರ್, 11 ಸಬ್ ಇನ್ಸ್ ಪೆಕ್ಟರ್, 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ಮಸೀದಿಗಳ ಬಳಿ ಬ್ಯಾರಿಕೇಡ್ ಹಾಕಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಗಣೇಶಮೂರ್ತಿಗಳ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಇಲಾಖೆಯಿಂದಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡಲಿ’
10000 ಎಂಎಎಚ್‌ ಬ್ಯಾಟರಿಯ ರೆಡ್‌ಮಿ 17 ಬಿಡುಗಡೆ