ಅಯೋಧ್ಯೆಯ ರಾಮನ ಅವತಾರ ಎತ್ತಿದ ಗಣಪ!

KannadaprabhaNewsNetwork |  
Published : Aug 25, 2024, 01:50 AM IST
19ಡಿಡಬ್ಲೂಡಿ1ಕಲಾವಿದ ಮಂಜುನಾಥ ಅವರ ಕೈಯಲ್ಲಿ ಅಂತಿಮ ಸ್ಪರ್ಶ ಪಡೆದುಕೊಳ್ಳುತ್ತಿರುವ ಗಣೇಶ ಮೂರ್ತಿಗಳು | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾನೆ ಹಿನ್ನೆಲೆಯಲ್ಲಿ ರಾಮ ಅವತಾರದಲ್ಲಿ ಗಣೇಶ ಈ ಬಾರಿಯ ಆಕರ್ಷಣೆ. ಹೆಚ್ಚಿನ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ರಾಮನ ಅವತಾರದಲ್ಲಿ ಗಣೇಶನನ್ನ ಪೂಜಿಸಲು ಸಿದ್ಧವಾಗಿವೆ.

ಬಸವರಾಜ ಹಿರೇಮಠ

ಧಾರವಾಡ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದು ನಗರ ಹಬ್ಬವನ್ನು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಸಿದ್ಧವಾಗುತ್ತಿದೆ. ಅದರಲ್ಲೂ ಅಯೋಧ್ಯೆಯ ರಾಮನ ಅವತಾರ ಎತ್ತಿರುವ ಗಣೇಶ ಮೂರ್ತಿಗಳು ಈ ಬಾರಿ ಆಕರ್ಷಣೆಯಾಗಲಿವೆ.ಸಾಮಾನ್ಯವಾಗಿ ಹಿಂದೂಗಳ ಬಹುತೇಕ ಹಬ್ಬಗಳು ಒಂದೆರೆಡು ದಿನಗಳಿಗೆ ಸೀಮಿತವಾಗಿರುತ್ತವೆ. ಆದರೆ, ಗಣೇಶ ಹಬ್ಬ ಮಾತ್ರ ಕನಿಷ್ಠ ಐದು ದಿನಗಳಿಂದ ಹಿಡಿದು 21 ದಿನದ ವರೆಗೂ ಆಚರಣೆಯಾಗುತ್ತದೆ. ಜತೆಗೆ ಗಣೇಶ ಮೂರ್ತಿ ಕಲಾವಿದರು ಹಬ್ಬದ ಆರು ತಿಂಗಳು ಮುಂಚಿತವಾಗಿಯೇ ಸಾರ್ವಜನಿಕ ಗಣೇಶ ಮೂರ್ತಿಗಳ ತಯಾರಿ ಶುರು ಮಾಡಿದ್ದು, ಗಣೇಶ ಚತುರ್ಥಿಗೆ ಇನ್ನು 15 ದಿನ ಬಾಕಿ ಉಳಿದಿದ್ದು ಇದೀಗ ಕೊನೆ ಹಂತದ ಸ್ಪರ್ಶ ನೀಡುತ್ತಿದ್ದಾರೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ಹಾವಳಿ ಹೆಚ್ಚಾಗಿದ್ದು, ಈ ಬಾರಿ ಕಡ್ಡಾಯವಾಗಿ ಪಿಒಪಿ ಗಣೇಶ ಮೂರ್ತಿ ಸ್ಥಾಪಿಸುವಂತಿಲ್ಲ ಎಂದು ತಿಂಗಳು ಮುಂಚೆಯೇ ಪರಿಸರವಾದಿಗಳು, ಕಲಾವಿದರು, ಅಧಿಕಾರಿಗಳು ಸಭೆ ಮಾಡಿ ಕಟ್ಟೆಚ್ಚರ ಮಾಡಿದ್ದರ ಫಲವಾಗಿ ಮಣ್ಣಿನ ಮೂರ್ತಿ ಕಲಾವಿದರು ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದಾರೆ. ಇಷ್ಟಾಗಿಯೂ ಕೊನೆ ಕ್ಷಣದಲ್ಲಿ ಪೂನಾ ಹಾಗೂ ಆಂಧ್ರ ಭಾಗದಿಂದ ಪಿಒಪಿ ಮೂರ್ತಿಗಳು ಬಂದರೂ ಅಚ್ಚರಿ ಏನಿಲ್ಲ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಚುತುರ್ಥಿ ಸಮೀಪಿಸುತ್ತಿದ್ದಂತೆ ಇನ್ನಷ್ಟು ಕಟ್ಟೆಚ್ಚರ ವಹಿಸಬೇಕು ಎನ್ನುವುದು ಮಣ್ಣಿನ ಮೂರ್ತಿ ಕಲಾವಿದರ ಆಗ್ರಹ.

ಹಲವು ವರ್ಷಗಳಿಂದ ಗಣೇಶ ಮೂರ್ತಿ ಸಿದ್ಧಪಡಿಸುತ್ತಿರುವ ಇಲ್ಲಿಯ ಕೆಲಗೇರಿಯ ಮಣ್ಣಿನ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಈ ಬಾರಿಯೂ 80ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.ರಾಮನ ಅವತಾರ

ಇದೇ ವರ್ಷ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾನೆ ಹಿನ್ನೆಲೆಯಲ್ಲಿ ರಾಮ ಅವತಾರದಲ್ಲಿ ಗಣೇಶ ಈ ಬಾರಿಯ ಆಕರ್ಷಣೆ. ಹೆಚ್ಚಿನ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ರಾಮನ ಅವತಾರದಲ್ಲಿ ಗಣೇಶನನ್ನ ಪೂಜಿಸಲು ಸಿದ್ಧವಾಗಿವೆ. ಕಲಾವಿದ ಮಂಜುನಾಥ ಬಳಿ 80 ಸಾರ್ವಜನಿಕ ಗಣಪತಿಗಳ ಪೈಕಿ 14 ಗಣಪತಿ ರಾಮನ ಅವತಾರದಲ್ಲಿವೆ. ಸಿಂಹಾಸನ ಮೇಲೆ ಕುಳಿತಿರುವ ರಾಜಾ ರಾಮಾ ಅವತಾರದಲ್ಲಿ ಎಂಟು ಗಣಪತಿ, ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಮಲಲ್ಲಾ ಅವತಾರದಲ್ಲಿ ಆರು ಸೇರಿ 14 ಸಾರ್ವಜನಿಕ ಗಣಪತಿಗಳು ಶ್ರೀರಾಮನ ಅವತಾರದಲ್ಲಿದ್ದು, ಉಳಿದಂತೆ ಮನೆ ಗಣಪತಿಯಲ್ಲೂ ಶ್ರೀರಾಮ ಈ ಬಾರಿ ಗಣಪತಿ ವೇಷದಲ್ಲಿ ಬರುತ್ತಿದ್ದಾನೆ. ಉಳಿದಂತೆ ಧಾರವಾಡದಲ್ಲಿ 250ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾನೆಯಾಗಲು ಸಿದ್ಧತೆ ನಡೆದಿದೆ. ಈ ಪೈಕಿ ಹೆಬ್ಬಳ್ಳಿ ಅಗಸಿ, ಸೈದಾಪೂರ ಕಲ್ಮೇಶ್ವರ ದೇವಸ್ಥಾನ, ಸುಭಾಸ ರಸ್ತೆ, ಗಾಂಧಿಚೌಕ್‌, ಟಿಕಾರೆ ರಸ್ತೆ, ಜವಳಿ ಗಲ್ಲಿ, ಅಕ್ಕಿ ಪೇಟೆ, ಹೊಸಯಲ್ಲಾಪೂರ ಹಾಗೂ ಹಳೇ ಧಾರವಾಡದಲ್ಲಂತೂ ಪ್ರತಿ ಓಣಿಗೊಂದು ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗಲಿವೆ.

ಪಿಓಪಿ ಬಂದ್

ಈಗಾಗಲೇ ಗಣೇಶ ಹಬ್ಬದ ನಿಮಿತ್ತ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರು, ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದು, ಪಿಒಪಿ ಗಣೇಶ ಮೂರ್ತಿ ಬಂದ್‌ ಮಾಡಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನೆ ಮಾಡುವ ಮಂಡಳಗಳಿಗೆ ಪರವಾನಗಿ ಪಡೆಯಲು ತೊಂದರೆ ಆಗದಂತೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸಲು ಅನುಕೂಲ ಕಲ್ಪಿಸಲಾಗಿದೆ. ಹಿಂದೂಗಳ ಪ್ರಮುಖ ಹಬ್ಬ ಇದಾಗಿದ್ದು ನಿಯಮಗಳು ಸಂಸ್ಕೃತಿಗೆ ಧಕ್ಕೆ ಬರದಂತೆ ಎಚ್ಚರ ವಹಿಸಲು ಮನವಿ ಮಾಡಿಕೊಳ್ಳಲಾಗಿದೆ. ಮಂಡಳಗಳು ಸಹ ಮಿತಿಮೀರಿ ವರ್ತನೆ ಮಾಡದಂತೆಯೂ ಎಚ್ಚರಿಕೆ ನೀಡಲಾಗಿದೆ.

- ವಸಂತ ಅರ್ಕಾಚಾರಿ, ಕಾರ್ಯಾಧ್ಯಕ್ಷರು, ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ, ಧಾರವಾಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!