ಗಣೇಶನ ಮುಖ-ಕೈಗೆ ಕಪ್ಪುಬಟ್ಟೆ, ಭಕ್ತರ ತೋಳಿಗೆ ಕಪ್ಪುಪಟ್ಟಿ!

KannadaprabhaNewsNetwork |  
Published : Sep 16, 2025, 12:03 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಗೌರಿ-ಗಣಪತಿ ಹಬ್ಬದ ಆರಂಭದಿಂದಲೂ ಹಲವಾರು ವಿಘ್ನಗಳನ್ನು ತಂದೊಡ್ಡಿದ್ದಲ್ಲದೇ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂಗಳ ಹಬ್ಬ, ಆಚರಣೆಗಳಿಗೆ ನಿರ್ಬಂಧ ಹೇರುತ್ತಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ತಡರಾತ್ರಿ ಶ್ರೀ ವಿಘ್ನೇಶ್ವರನ ಮುಖ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ್ದ ಬೆನ್ನಲ್ಲೇ ಮತ್ತೊಂದು ಕಡೆ ಸೋಮವಾರ ತೋಳಿಗೆ ಕಪ್ಪು ಪಟ್ಟೆ, ಕಪ್ಪು ಅಂಗಿ ಧರಿಸಿ, ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರರ ಸಮೇತ ಮೌನ ಮೆರವಣಿಗೆ ನಡೆಸಲಾಯಿತು.

- ವಿಘ್ನೇಶ್ವರನ ಹಬ್ಬಕ್ಕೆ ನೂರೆಂಟು ವಿಘ್ನ ತಂದ ಆಡಳಿತ ಯಂತ್ರ: ಆಕ್ರೋಶ । ಹಿಂದೂಗಳಿಂದ ಮೌನ ಹೋರಾಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೌರಿ-ಗಣಪತಿ ಹಬ್ಬದ ಆರಂಭದಿಂದಲೂ ಹಲವಾರು ವಿಘ್ನಗಳನ್ನು ತಂದೊಡ್ಡಿದ್ದಲ್ಲದೇ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂಗಳ ಹಬ್ಬ, ಆಚರಣೆಗಳಿಗೆ ನಿರ್ಬಂಧ ಹೇರುತ್ತಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ತಡರಾತ್ರಿ ಶ್ರೀ ವಿಘ್ನೇಶ್ವರನ ಮುಖ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ್ದ ಬೆನ್ನಲ್ಲೇ ಮತ್ತೊಂದು ಕಡೆ ಸೋಮವಾರ ತೋಳಿಗೆ ಕಪ್ಪು ಪಟ್ಟೆ, ಕಪ್ಪು ಅಂಗಿ ಧರಿಸಿ, ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರರ ಸಮೇತ ಮೌನ ಮೆರವಣಿಗೆ ನಡೆಸಲಾಯಿತು.

ನಗರದ ಮಟ್ಟಿಕಲ್ಲು ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಸ್ವಾತಂತ್ರ್ಯ ವೀರ ಸಾವರ್ಕರ್ ಯುವಕರ ಬಳಗ ಪ್ರತಿಷ್ಟಾಪಿಸಿದ್ದ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮಧ್ಯಾಹ್ನದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ವಿದ್ಯಾರ್ಥಿ, ಯುವಕ-ಯುವತಿಯರು, ಹಿರಿಯರು ತೋಳಿಗೆ ಕಪ್ಪುಪಟ್ಟಿ ಧರಿಸಿ, ಮೌನವಾಗಿ ಮೆರವಣಿಗೆ ನಡೆಸಿದರು. ಆ ಮೂಲಕ ವಿಘ್ನೇಶ್ವರನನ್ನು ಬೀಳ್ಕೊಡುವ ಮೂಲಕ ರಾಜ್ಯ ಸರ್ಕಾರಕ್ಕೆ ಒಂದು ತಣ್ಣನೆಯ ಎಚ್ಚರಿಕೆ ಸಂದೇಶ ರವಾನಿಸಿದರು. ಕಳೆದ ರಾತ್ರಿಯಷ್ಟೇ ಬಸವರಾಜ ಪೇಟೆಯಲ್ಲಿ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ವಿಚಾರಕ್ಕೆ ಹಿಂದೂಗಳು ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಧ್ಯೆ ತೀವ್ರ ಹೈಡ್ರಾಮಾ ನಡೆಯಿತು. ಪ್ರತಿ ವರ್ಷದಂತೆ ತಾವು ಗಣೇಶನ ಮೆರವಣಿಗೆ ಸಾಗುವ ಹಾಸಬಾವಿ ವೃತ್ತ ಮಾರ್ಗವಾಗಿ ಸಾಗಲು ಸಂಘಟಕರು, ಹಿಂದುಗಳು ಮುಂದಾದರು. ಆಗ ಪೊಲೀಸರು ಮೆರವಣಿಗೆ ತಡೆದರು. ಪ್ರತಿವರ್ಷ ನಾವು ಮದೀನಾ ಆಟೋ ಸ್ಟ್ಯಾಂಡ್‌, ಹಾಸಬಾವಿ ವೃತ್ತದ ಮಾರ್ಗವಾಗಿಯೇ ಸಾಗುತ್ತೇವೆ. ಈ ಸಲವೂ ಅದೇ ಹಾದಿಯಲ್ಲೇ ಸಾಗುತ್ತೇವೆಂದು ಹಿಂದುಗಳು ಪಟ್ಟುಹಿಡಿದರು.

ಪೊಲೀಸರು ಹಳೇ ಮಾರ್ಗ ಬೇಡ, ತಾವು ಹೇಳಿದ ಮಾರ್ಗದಲ್ಲೇ ಗಣಪತಿ ಮೆರವಣಿಗೆ ಸಾಗಬೇಕು ಎಂಬುದಾಗಿ ಹೇಳಿದರು. ಆಗ ಭಕ್ತರು, ಮಹಿಳೆಯರೂ ರಸ್ತೆಗಿಳಿದು ಪೊಲೀಸರ ಜೊತೆ ವಾಗ್ವಾದಕ್ಕಿಳಿದು, ಕಣ್ಣೀರು ಹಾಕಿದರು. ಕಡೆಗೆ ಗಣೇಶನ ಮುಖ ಮತ್ತು ಕೈಗಳಿಗೆ ಕಪ್ಪುಬಟ್ಟೆಯನ್ನು ಕಟ್ಟಿದ ಸಂಘಟಕರು, ಹಿಂದುಗಳು ಗಣೇಶಪ್ಪ ಇದು ನಿನ್ನ ಕಾಲವಲ್ಲ, ಹಿಂದೂಗಳಿಗೂ ಒಂದು ಕಾಲ ಬರುತ್ತದೆಂದು ಆಡಳಿತ ಯಂತ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದರು.

ನಿರ್ಬಂಧ ಹೇರಿಕೆಗೆ ಖಂಡನೆ:

ಮಾರನೆಯ ದಿನ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ತೆರವುಗೊಳಿಸಿದ್ದ ಮಟ್ಟಿಕಲ್ಲು ಗಣೇಶೋತ್ಸವ ಮೆರವಣಿಗೆ ನಡೆಯಬೇಕಾಗಿತ್ತು. ಅಲ್ಲಿಯೂ ಪ್ರತಿ ವರ್ಷದಂತೆ ಸಾಗುವ ಮಾರ್ಗದ ಬದಲಿಗೆ ಬೇರೆ ಮಾರ್ಗದಲ್ಲಿ ಸಾಗುವಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗಳ ಸೂಚನೆ ವಿರೋಧಿಸಲಾಯಿತು. ಅಲ್ಲದೇ, ಸಂಘ ಪರಿವಾರ, ಬಿಜೆಪಿ ನಾಯಕರ ನೇತೃತ್ವದಲ್ಲಿ ಮಕ್ಕಳಾದಿಯಾಗಿ ಎಲ್ಲರೂ ಮೌನವಾಗಿ ತೋಳಿಗೆ ಕಪ್ಪುಪಟ್ಟಿ ಧರಿಸಿ, ಕಪ್ಪು ಶರ್ಟ್ ಧರಿಸಿ, ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾರ ಓಲೈಕೆಗಾಗಿ ಹಿಂದೂಗಳ ಅನೇಕ ಹಬ್ಬ, ಆಚರಣೆಗಳು ಸೇರಿದಂತೆ ಗಣೇಶ ಹಬ್ಬಕ್ಕೂ ಇಲ್ಲಸಲ್ಲದ ನಿರ್ಬಂಧ ಹೇರುತ್ತಿದೆ ಎಂದು ಖಂಡಿಸಿದರು.

ಮಟ್ಟಿಕಲ್ಲು ಬಳಿಯಿಂದ ಆರಂಭವಾದ ಮೆರವಣಿಗೆ ಬಂಬೂ ಬಜಾರ್ ರಸ್ತೆ, ಗಣೇಶ ಹೋಟೆಲ್, ಪಿ.ಬಿ. ರಸ್ತೆ ಮೂಲಕ ಸಾಗಿ ಎಸಿ ಕಚೇರಿವರೆಗೆ ಸಾಗಿ ಮೆರವಣಿಗೆ ಮುಕ್ತಾಯಗೊಂಡಿತು. ಅನಂತರ ಹರಿಹರ ನಗರದ ತುಂಗಭದ್ರಾ ನದಿಯಲ್ಲಿ ಶ್ರೀ ಗಣೇಶ ವಿಸರ್ಜನೆ ನಡೆಯಿತು.

ಮಟ್ಟಿಕಲ್ಲು ಸ್ಥಳದಲ್ಲಿ ಕೆಲ ದಿನಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜ ಬ್ಯಾನರ್ ವಿಚಾರಕ್ಕೆ ವಾಗ್ವಾದ ನಡೆದಿತ್ತು. ಶಿವಾಜಿ ಮಹಾರಾಜರು ಮತಾಂಧ ಅಫ್ಜಲ್ ಖಾನ್‌ನನ್ನು ವಧೆ ಮಾಡುವ ಫ್ಲೆಕ್ಸ್ ತೆರವುಗೊಳಿಸುವ ವಿಚಾರಕ್ಕೆ ಮಟ್ಟಿಕಲ್ಲು ಇಡೀರಾಜ್ಯದ ಗಮನ ಸೆಳೆದಿತ್ತು.

ಸಂಘ ಪರಿವಾರದ ಸಿದ್ದಲಿಂಗಸ್ವಾಮಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಆರ್.ಎಲ್. ಶಿವಪ್ರಕಾಶ, ಮಟ್ಟಿಕಲ್ಲು ಪ್ರದೀಪ ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

- - -

(ಬಾಕ್ಸ್‌) ತುಷ್ಟೀಕರಣ ರಾಜಕೀಯ: ಯಶವಂತ ರಾವ್ ಆಕ್ರೋಶ

ದಾವಣಗೆರೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಓಲೈಕೆ ಭರದಲ್ಲಿ ಹಿಂದೂ ಧರ್ಮದ ಆಚರಣೆಗಳು, ಹಬ್ಬ ಹರಿದಿನಗಳಿಗೆ ಅವಕಾಶ ನೀಡುತ್ತಿಲ್ಲ. ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗಕ್ಕೂ ನಿರ್ಬಂಧ ಹೇರುವ ಕೆಲಸ ಕಾಂಗ್ರೆಸ್ ಸರ್ಕಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳ ಮುಖಾಂತರ ಮಾಡಿಸುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡರ ಯಶವಂತ ರಾವ್ ಜಾಧವ್ ಕಿಡಿಕಾರಿದರು.

ನಗರದ ಮಟ್ಟಿಕಲ್ಲು ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾಯಿತು. ಈದ್ ಮಿಲಾದ್ ವೇಳೆ ಪ್ಯಾಲೇಸ್ತೀನ್ ಧ್ವಜ ಹಾರಾಡಿದವು. ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಯಿತು. ಆದರೂ, ಕಾಂಗ್ರೆಸ್ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ಅನ್ಯಾಯ ಖಂಡಿಸಿ, ತೋಳಿಗೆ ಕಪ್ಪುಬಟ್ಟೆ ಧರಿಸಿ, ಮೌನವಾಗಿ ಗಣೇಶನ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು.

- - -

-(ಫೋಟೋ ಬರಲಿವೆ)

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ