ಮಂಜುನಾಥ ಗದಗಿನ
ಗಣೇಶ, ಗಣೇಶೋತ್ಸವ ಹಿಂದುಗಳ ಧಾರ್ಮಿಕ ಹಬ್ಬಗಳಲ್ಲಿ ಅತೀ ಪ್ರಮುಖ ಹಬ್ಬ. ಈ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಪರಿಸರಕ್ಕೆ ಹಾನಿಕರವಾದ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಆದರೆ, ಈ ಗಣೇಶೋತ್ಸವ ಮುಗಿದ ನಂತರ ಪಿಒಪಿ ಗಣೇಶ ಮೂರ್ತಿಗಳ ವಿಲೇವಾರಿ ಮಾಡುವುದೇ ಹರಸಾಹಸವಾಗಿದೆ. ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಸುತ್ತಿಗೆ, ಗರಗಸದಿಂದ ಗಣೇಶನ ಒಂದೊಂದೆ ಅಂಗಗಳನ್ನು ಕತ್ತರಿಸಿ ವಿಲೇವಾರಿ ಮಾಡಬೇಕಿದೆ. ಕಾರಣ, ಮಣ್ಣಾಗಿದ್ದರೆ, ಮೂರ್ತಿಗಳು ಕರಗುತ್ತಿದ್ದವು. ಆದರೆ, ಪಿಒಪಿ ಆಗಿರುವುದರಿಂದ ಕತ್ತರಿಸಿ ವಿಲೇವಾರಿ ಅನಿವಾರ್ಯವಾಗಿದೆ.
ಗಣೇಶನ ಪ್ರತಿಷ್ಠಾಪನೆ ನಂತರ 11 ದಿನಗಳ ನಂತರ ವಿಸರ್ಜನೆ ಅನಿವಾರ್ಯ. ಆದರೆ, ವಿಸರ್ಜನೆ ನಂತರ ಮುಂದೇನು ಎಂಬ ಪ್ರಶ್ನೆ ಪ್ರತಿಬಾರಿ ಎದುರಾಗುತ್ತದೆ. ಹೀಗಾಗಿ ಮೂರ್ತಿಗಳ ವಿಲೇವಾರಿ ಮಾಡುವುದೇ ದುಸ್ತರ. ಕೆರೆ, ಬಾವಿ, ಕೃತಕ ಹೊಂಡಗಳಲ್ಲಿ ಪಕ್ಕದಲ್ಲಿ ಕೈ-ಕಾಲು, ಸೊಂಡಿಲು ಕಳೆದುಕೊಂಡು ಅನಾಥವಾಗಿ ಬಿದ್ದಿರುತ್ತವೆ. ಇದನ್ನು ನೋಡಿದರೆ ಗಣಪನ ಸ್ಥಿತಿ ಮರುಕಪಡುವವರೇ ಹೆಚ್ಚು.ಜಾಗೃತಿ ಮೂಡಿಸಿದರೂ ಪ್ರಯೋಜನವಿಲ್ಲ:
ಗಣೇಶ ಮೂರ್ತಿಗಳನ್ನು ಕೆರೆ, ಬಾವಿ, ಹೊಂಡಗಳಲ್ಲಿ ವಿಸರ್ಜನೆ ಮಾಡಲಾಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುತ್ತದೆ. ಆದರೆ, ಪಿಒಪಿ ಗಣೇಶ ಮೂರ್ತಿಗಳು ಮಾತ್ರ ನೀರಿನಲ್ಲಿ ಕರಗದ ಹಿನ್ನೆಲೆಯಲ್ಲಿ ಮೂರ್ತಿಗಳನ್ನು ಹೊರ ತೆಗೆದು ದಡದಲ್ಲಿ ಹಾಕಿದ್ದಾರೆ. ಆಳೇತ್ತರದ ಪಿಒಪಿ ಗಣೇಶ ಮೂರ್ತಿಗಳ ಕೈ-ಕಾಲು, ಸೊಂಡಿಲುಗಳನ್ನು ಕತ್ತರಿಸಿ, ಸುತ್ತಿಗೆಯಿಂದ ಹೊಡೆದು ಹೊಡೆದು ಜಗ್ಗಿ ಅವುಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತಿದೆ. ನಂತರ ಎಲ್ಲ ಮೂರ್ತಿಗಳ ಭಾಗಗಳನ್ನು ಹೊರಭಾಗಕ್ಕೆ ವಿಲೇವಾರಿ ಮಾಡಲಾಗುತ್ತಿದೆ ಎನ್ನಲಾಗಿದೆ.---------
ಈ ಬಾರಿ ಬೆಳಗಾವಿ ನಗರವೊಂದರಲ್ಲೇ 350ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಅವುಗಳಲ್ಲಿ ಆಳೇತ್ತರ ಪಿಒಪಿ ಗಣೇಶ ಮೂರ್ತಿಗಳೇ ಅಧಿಕವಾಗಿದ್ದವು. ಒಂಬತ್ತು ದಿನ, ಹನ್ನೊಂದು ದಿನ ಹೀಗೆ ಈ ಗಣೇಶ ಮೂರ್ತಿಗಳನ್ನು ಬೆಳಗಾವಿ ನಗರದ ಶಹಾಪುರದ ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೆಯ ಹೊಂಡ, ಜಕ್ಕೇರಿ ಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್ ತಾಲಾಬ್, ಮಜಗಾವಿ ಕೆರೆ, ವಡಗಾವಿಯ ನಾಜರ್‌ಕ್ಯಾಂಪ್ ಸೇರಿ ಎಂಟು ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಗಣೇಶ ವಿಸರ್ಜನೆ ನಂತರ ಈ ಗಣೇಶ ಮೂರ್ತಿಗಳ ವಿಲೇವಾರಿಯೇ ಕಷ್ಟವಾಗಿದೆ. 2-3 ದಿನಗಳಿಂದ ಮಹಾನಗರ ಪಾಲಿಕೆ ಸಿಬ್ಬಂದಿ ಗಣೇಶ ಮೂರ್ತಿಗಳ ವಿಲೇವಾರಿಯಲ್ಲಿ ನಿರತರಾಗಿದ್ದಾರೆ.
ಇನ್ನಾದರೂ ಜಾಗೃತರಾಗಿ
-ಜಾನ್ಞೇಶ್ವರ ಹೆಬ್ಬಾಳಿ, ಸಾರ್ವಜನಿಕ.