ಮುಳಗುಂದ: ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಯುವಕ ಸಂಘ, ಸಂಸ್ಥೆಗಳ ಸದಸ್ಯರು ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಗದಗ ಡಿವೈಎಸ್‍ಪಿ ಮುರ್ತುಜಾ ಖಾದ್ರಿ ಹೇಳಿದರು.
ಸಿಪಿಐ ಬಿ.ಜಿ. ಸುಬ್ಬಾಪುರಮಠ ಮಾತನಾಡಿ, ಪಿಒಪಿ ಮತ್ತು ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನ ಕೆರೆ, ಬಾವಿಯಲ್ಲಿ ವಿಸರ್ಜನೆ ಮಾಡುವಂತಿಲ್ಲ, ಹೀಗಾಗಿ ಮಣ್ಣಿನ ಮೂರ್ತಿಗಳನ್ನೆ ಪ್ರತಿಷ್ಠಾಪಿಸಿ. ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ 70 ಡೆಸಿಬಲ್‍ಗಿಂತ ಕಡಿಮೆ ಇರುವ ಧ್ವನಿವರ್ಧಕ ಬಳಕೆಗೆ ಅವಕಾಶವಿದೆ. ಉತ್ಸವ ನೆಪದಲ್ಲಿ ರಸ್ತೆಗೆ ಅಡ್ಡನಿಂತು ಚಂದಾ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಗಣೇಶ ಹಬ್ಬವು ಏಕತೆ, ಪಾವಿತ್ರ್ಯದ ಹಬ್ಬವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದರು.
ಪಿಎಸ್‍ಐ ಡಿ.ಎಂ. ಮುಲ್ಲಾ, ಪಪಂ ಮಾಜಿ ಸದಸ್ಯ ಅಶೋಕ ಹುಣಸಿಮರದ, ಕಿರಣ ನೀಲಗುಂದ, ದೇವರಾಜ ಸಂಗನಪೇಟಿ, ದೇವಪ್ಪ ಅಣ್ಣಿಗೇರಿ, ಮಹಾಂತೇಶ ಕಣವಿ ಇದ್ದರು.