ಅಜೀಜಅಹ್ಮದ ಬಳಗಾನೂರ
ಗಣೇಶೋತ್ಸವವೆಂದರೆ ಭಕ್ತಿ, ಸಂಭ್ರಮ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ. ಆದರೆ, ಹುಬ್ಬಳ್ಳಿಯ ಹಿರೇಪೇಟೆ, ಭೂಸಪೇಟೆ ಹಾಗೂ ಕಂಚಗಾರ ಓಣಿಯ ಶ್ರೀ ಗಣೇಶೋತ್ಸವ ಮಂಡಳಿಯು ಗಣೇಶನ ಮಂಟಪದಲ್ಲೇ ಜನರ ಸಮಸ್ಯೆ, ನಾಡಿನ ಹೋರಾಟ ಹಾಗೂ ದೇಶದ ಪ್ರಮುಖ ಘಟನೆಗಳು ಸನ್ನಿವೇಶಗಳಾಗಿ ರೂಪ ಪಡೆದು ಜನಜಾಗೃತಿಗೆ ವೇದಿಕೆಯಾಗಿವೆ.
1974ರಲ್ಲಿ ಆರಂಭವಾದ ಮಂಡಳಿ ಇದೀಗ 53ನೇ ವರ್ಷಕ್ಕೆ ಕಾಲಿಟ್ಟಿದ್ದು, ಧಾರ್ಮಿಕ ಆಚರಣೆಯ ಜತೆಗೆ ಸಾಮಾಜಿಕ ಕಾಳಜಿಯ ಪರಂಪರೆಯನ್ನೂ ಮುಂದುವರಿಸಿಕೊಂಡು ಬಂದಿದೆ. 1998-99ರಲ್ಲಿ ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಗಳಾದ ಹುಬ್ಬಳ್ಳಿಯಲ್ಲಿ ಹೈಕೋರ್ಟ್ ಪೀಠ ಹಾಗೂ ನೈಋತ್ಯ ರೈಲ್ವೆ ವಲಯ ಕಚೇರಿ ಸ್ಥಾಪನೆಗಾಗಿ ನಡೆದ ಹೋರಾಟಕ್ಕೆ ಬೆಂಬಲವಾಗಿ ಹೈಕೋರ್ಟ್ ಪೀಠದ ಸನ್ನಿವೇಶ ಹಾಗೂ ರೈಲಿನ ಮಾದರಿ, 2004ರಲ್ಲಿ ಸೇತುಸಮುದ್ರಂ ಯೋಜನೆ ವಿರುದ್ಧದ ರಾಮಸೇತು ಉಳಿವಿನ ಅಭಿಯಾನ, 2016ರ ಕಳಸಾ-ಬಂಡೂರಿ ಹೋರಾಟದ ವೇಳೆ ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಸಮುದ್ರ ಸೇರುವ ನದಿಗಳ ಸನ್ನಿವೇಶ ರೂಪಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು. ಹೋರಾಟ ನಿರತ ರೈತರಿಂದ ಗಣೇಶನಿಗೆ ಪೂಜೆ ಸಲ್ಲಿಸಲಾಗಿತ್ತು. 2018ರಲ್ಲಿ ಮಾಜಿ ಪ್ರಧಾನಿ ದಿ. ಅಟಲ್‌ಬಿಹಾರಿ ವಾಜಪೇಯಿ ಹಾಗೂ ಮಾಜಿ ರಾಷ್ಟ್ರಪತಿ ದಿ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮರಣಾರ್ಥ ಪೋಕ್ರಾನ್ ಅಣುಪರೀಕ್ಷೆ, ವಿಂಗ್ ಕಮಾಂಡರ್ ಅಭಿನಂದನ್ ಅವರ ಪಾಕಿಸ್ತಾನದಿಂದ ಸುರಕ್ಷಿತ ವಾಪಸಾತಿಯ ಘಟನೆಯನ್ನೂ ಸನ್ನಿವೇಶದ ಮೂಲಕ ಪರಿಚಯಿಸಿತ್ತು.ಸಂತ್ರಸ್ತರ ಕೈಹಿಡಿದ ಹಿರಿಯರು:
ಉಜ್ಜಯಿನಿಯಲ್ಲಿ 2028ರಲ್ಲಿ ಕುಂಭಮೇಳ ನಡೆಯಲಿದೆ. ಈ ಹಿನ್ನೆಲೆ ಈ ಬಾರಿ ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಪೌರಾಣಿಕ ಕಥೆಯನ್ನು ಸನ್ನಿವೇಶಗೊಳಿಸಲಾಗಿದೆ. ಶ್ರೀಕರ ಬಾಲಕನ ಶಿವಭಕ್ತಿ, ದೂಷಣ ರಾಕ್ಷಸನ ದಾಳಿ ಹಾಗೂ ಭಕ್ತರ ರಕ್ಷಣೆಗಾಗಿ ಮಹಾಕಾಲ ರೂಪದಲ್ಲಿ ಶಿವ ಪ್ರತ್ಯಕ್ಷನಾದ ಕಥೆ ದೃಶ್ಯರೂಪದಲ್ಲಿ ಮೂಡಿಬಂದಿದೆ.ಇಲ್ಲಿ ಪ್ರತಿ ವರ್ಷವೂ ನೈಜ ಸನ್ನಿವೇಶ ಪ್ರಸ್ತುತ ಪಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ 2028ರಲ್ಲಿ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯಲಿರುವ ಹಿನ್ನೆಲೆ ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಪೌರಾಣಿಕ ಕಥೆ ಪ್ರಸ್ತುತಪಡಿಸಲಾಗುತ್ತಿದೆ.