ಹುಬ್ಬಳ್ಳಿ: ಗಣೇಶೋತ್ಸವ ವೇಳೆ ರಾತ್ರಿ 10ರ ಬಳಿಕ ಡಿಜೆ ಬಳಸಲು ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ವಷ್ಟಪಡಿಸಿದರು.
ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ ಗಣೇಶೋತ್ಸವ ಮತ್ತು ಈದ್ ಮಿಲಾದ್ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಸಭಿಕರಿಂದ ಮನವಿ ಆಲಿಸಿ ಮಾತನಾಡಿದರು.ಗಣೇಶೋತ್ಸವದಲ್ಲಿ ರಾತ್ರಿ 10ರ ಬಳಿಕವೂ ಡಿಜೆ ಬಳಸಲು ಅನುಮತಿ ನೀಡುವಂತೆ ಮಂಡಳಿಗಳು ಕೋರಿವೆ. ಆದರೆ, ಸುಪ್ರೀಂಕೋರ್ಟ್ ಆದೇಶ ಮೀರಿ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ರಾತ್ರಿ 10ರ ಬಳಿಕೆ ಡಿಜೆ ಬಳಕೆಗೆ ಅನುಮತಿ ಇಲ್ಲ ಎಂದು ಸ್ಷಪ್ಟಪಡಿಸಿದರು.
ಈ ವೇಳೆ ಗಣೇಶೋತ್ಸವ ಮಂಡಳಿಗಳ ಪರವಾಗಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಗಣೇಶೋತ್ಸವ ವೇಳೆ ಮರುದಿನ ಬೆಳಗಿನ 6ರ ವರೆಗೆ ಡಿಜೆ ಬಳಸಲು ಅನುಮತಿ ನೀಡಬೇಕು. ಹುಬ್ಬಳ್ಳಿಯ ಗಣೇಶೋತ್ಸವಕ್ಕೆ ಹಳೆ ವೈಭವ ನೀಡಬೇಕು. ಹೊರ ಜಿಲ್ಲೆಗಳಿಂದ ಹುಬ್ಬಳ್ಳಿ ಗಣೇಶೋತ್ಸವ ನೋಡಲು ಜನ ಬರುತ್ತಾರೆ. ರಾತ್ರಿ ಇಡಿ ಡಿಜೆಗೆ ಅನುಮತಿ ನೀಡುವಂತೆ ಕೋರಿದರು.ಇದೇ ವೇಳೆ ಹಲವರು ಮಾತನಾಡಿ, ಮೆರವಣಿಗೆ ಸಾಗುವ ರಸ್ತೆಯಲ್ಲಿರುವ ತಗ್ಗುಗುಂಡಿಗಳನ್ನು ದುರಸ್ತಿ ಮಾಡುವ ಮತ್ತು ವಾಹನಗಳ ಪಾರ್ಕಿಂಗ್, ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ರಸ್ತೆಯಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಹಬ್ಬ ಮುಗಿಯುವ ತನಕ ಬಂದ್ ಮಾಡಿ ಸಹಕರಿಸಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಮೀನು ಮಾರುಕಟ್ಟೆಯಿಂದ ಚೆನ್ನಮ್ಮ ವೃತ್ತದ ವರೆಗೆ ಏಕಮುಖ ಸಂಚಾರವಿದ್ದು, ವಾಹನದಟ್ಟನೆ ಹೆಚ್ಚುತ್ತಿದೆ. ಹಬ್ಬದ ಸಮಯ ಮತ್ತಷ್ಟು ಸಮಸ್ಯೆ ಆಗಲಿದ್ದು, ಇದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಕೋರಿದರು.
ಈ ವೇಳೆ ಗಣೇಶೋತ್ಸವ ಮಹಾಮಂಡಳಿ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಹಿಂದೂ- ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದ ಜನಸೇರಿ ಸೌಹಾರ್ದದಿಂದ ಹಬ್ಬ ಆಚರಿಸುತ್ತೇವೆ. ಪೊಲೀಸ್ ಇಲಾಖೆ ವಿವಿಧ ಭಾಗದಿಂದ ಆಗಮಿಸುವ ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಿ. ಹಳೇ ಬಸ್ ನಿಲ್ದಾಣ ಎದುರಿಗೆ ವಾಹನ ಸಂಚಾರಕ್ಕಿರುವ ನಿರ್ಬಂಧ ತೆರವುಗೊಳಿಸಲಿ. ಇಕ್ಕಟ್ಟಾದ ರಸ್ತೆಯಲ್ಲಿ ಮೆರವಣಿಗೆ ನಡೆಯುವ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲು ಕೋರಿದರು.ಗಣೇಶೋತ್ಸವ ಮಹಾಮಂಡಳಿ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ಮಾತನಾಡಿ, ಗಣೇಶೋತ್ಸವ ಮತ್ತು ಬಕ್ರೀದ್ ನಾವೆಲ್ಲ ಸೌಹಾರ್ದಯುತವಾಗಿ ಆಚರಿಸೋಣ ಎಂದರು.
ಈ ವೇಳೆ ಮುಸ್ಲಿಂ, ಸಿಖ್, ಕ್ರೈಸ್ತ ಧರ್ಮ ಗುರುಗಳು ಮಾತನಾಡಿ, ಎಲ್ಲರೂ ಶಾಂತಿ, ಸೌಹಾರ್ದದಿಂದ ಹಬ್ಬಗಳನ್ನು ಆಚರಿಸೋಣ ಎಂದರು.ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀಗುರುರಾಜಯೋಗೀಂದ್ರ ಮಹಾಸ್ವಾಮೀಜಿ, ಹುಬ್ಬಳ್ಳಿ ಹಿಂದಿನಿಂದಿಲೂ ಸೌಹಾರ್ದಕ್ಕೆ ಹೆಸರಾದ ಊರು. ಇಲ್ಲಿನ ಎಲ್ಲ ಸಮಾಜದ ಜನ ಪರಸ್ಪರ ಬೆರೆತು ಹಬ್ಬ ಆಚರಿಸುತ್ತೇವೆ. ಯುವಕ ಮಂಡಳಗಳು ಡಿಜೆ ಬಳಸಲಿ. ಅದರ ಜತೆಗೆ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿ ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯಮಾಡಲಿ ಎಂದು ಕಿವಿಮಾತು ಹೇಳಿದರು.
ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಸುಪ್ರಿಂಕೋರ್ಟ್ ಆದೇಶ ಮೀರಿ ಡಿಜೆ ಬಳಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ಎಲ್ಲ ಸಮಾಜದಲ್ಲಿ ಕೆಲ ಕಿಡಿಗೇಡಿಗಳಿರುತ್ತಾರೆ. ಅಂಥವರಿಗೆ ಆಯಾ ಸಮಾಜದ ಹಿರಿಯರು ತಿಳಿಹೇಳುವ ಮೂಲಕ ಶಾಂತಿಗೆ ಭಂಗಬರದಂತೆ ನೋಡಿಕೊಳ್ಳಬೇಕು. ಈಗಾಗಲೇ ಶಾಂತಿ ಕದಡುವಂತಹ 80ಕ್ಕೂ ಹೆಚ್ಚು ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಕೇಸ್ ದಾಖಲಿಸಲಾಗಿದ್ದು, ಅವರನ್ನು ಗಡೀಪಾರು ಮಾಡಲು ಇಷ್ಟರಲ್ಲೇ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಈಗಾಗಲೇ 4 ಪ್ರಕರಣಗಳಲ್ಲಿ ಗೂಂಡಾ ಆ್ಯಕ್ಟ್ ತೆರೆದಿದ್ದು, ಅವರೀಗ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಅವಳಿ ನಗರದಲ್ಲಿ ಅಪರಾಧ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಕ್ರೈಮ್ ಡಿಸಿಪಿ ಮಹಾನಿಂಗ ನಂದಗಾವಿ, ತಾಜುದ್ದೀನ್ ಪೀರ್ ಖಾದ್ರಿ, ಸಿಖ್ ಜ್ಞಾನಿ ಗುರವಂತ ಸಿಂಗ್, ಮ್ಯಾಕ್ಸಿನ್ ಡಿಸೋಜಾ, ಉದ್ಯಮಿ ವಿಎಸ್‌ವಿ ಪ್ರಸಾದ, ಮಹೇಂದ್ರ ಸಿಂಘಿ, ತಹಸೀಲ್ದಾರ್ ಮಹೇಶ ಗಸ್ತೆ, ಪಾಲಿಕೆ ಉಪಆಯುಕ್ತ ವಿಜಯಕುಮಾರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ರಮೇಶ ಕುಮಾರ ಮತ್ತಿತರರಿದ್ದರು.