ಧಾರವಾಡ: ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಳೆದ 48 ಗಂಟೆಗಳಲ್ಲಿ ಮಳೆಯಿಂದಾಗಿ 47 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಬರೀ ಎರಡು ದಿನಗಳಲ್ಲಿ ಜಿಲ್ಲೆಯ ಪೈಕಿ ಧಾರವಾಡದಲ್ಲಿ 25, ಹುಬ್ಬಳ್ಳಿ ನಗರ 10, ಕಲಘಟಗಿ 7, ಹುಬ್ಬಳ್ಳಿ ಗ್ರಾಮೀಣ 3 ಮತ್ತು ಕುಂದಗೋಳ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 47 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಮಾನವ ಮತ್ತು ಜಾನುವಾರು ಹಾನಿಯಾಗಿಲ್ಲ ಎಂದು ಜಿಲ್ಲಾಡಳಿತವು ಪ್ರಾಥಮಿಕ ವರದಿ ನೀಡಿದೆ. ಬೆಳೆನಷ್ಟ ಕುರಿತು ನಡೆಯುತ್ತಿರುವ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಇನ್ನು, ನಿರಂತರ ಮಳೆಯಿಂದ ಕುಂದಗೋಳ, ನವಲಗುಂದ, ಧಾರವಾಡ ಸೇರಿದಂತೆ ಹಲವು ಕಡೆಗಳಲ್ಲಿ ಹೆಸರು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ನಿರಂತರ ಮಳೆಯಿಂದಾಗಿ ರೈತರು ಮಮ್ಮುಲ ಮರಗುವಂತಾಗಿದೆ. ಅದೇ ರೀತಿ ಹತ್ತಿ, ಸೋಯಾ, ಉದ್ದಿನ ಸ್ಥಿತಿ ಬೇರಿಲ್ಲ.ಇಂದು ಸಹ ಶಾಲೆಗೆ ರಜೆ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಬುಧವಾರವೂ ಆ. 20 ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.