ಧಾರವಾಡ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಕೈಗೆ ಬಂದ ತುತ್ತು ರೈತರಿಗೆ ಸಿಗದಂತಾಗಿದ್ದು ರಾಜ್ಯ ಸರ್ಕಾರ ಕೂಡಲೇ ಬೆಳೆಹಾನಿ ವರದಿಯನ್ನು ಸಮರ್ಪಕವಾಗಿ ವಿಮಾ ಕಂಪನಿಗೆ ನೀಡಿ ಮಧ್ಯಂತರ ವಿಮೆ ಹಾಗೂ ಬೆಳೆಹಾನಿ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಮೀಣ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟಿಸಲಾಯಿತು.
ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೋರ್ಚಾ ಪದಾಧಿಕಾರಿಗಳು ಹಾಗೂ ರೈತರು, ಈ ಬಾರಿ ಆರಂಭದಿಂದ ಉತ್ತಮ ಮಳೆ ಹಿನ್ನೆಲೆಯಲ್ಲಿ ಮುಂಗಾರು ಶೇ. 100ಕ್ಕಿಂತ ಹೆಚ್ಚಿನ ಬಿತ್ತನೆಯಾಗಿದೆ. ಇನ್ನೇನು ಮುಂಗಾರು ಬೆಳೆಗಳನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬಂದ ಮಳೆ ಅಳಿದುಳಿದ ಬೆಳೆಯನ್ನು ನಾಶಮಾಡಿದೆ. ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಸಿಂಪರಣೆ, ಕಳೆ ಸೇರಿದಂತೆ ಬೆಳೆಗೆ ಎಲ್ಲ ರೀತಿಯ ಉಪಚಾರ ಮಾಡಿದ್ದು, ಇದೀಗ ಮಳೆಯಿಂದ ತೀವ್ರ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಾತಾವರಣದಲ್ಲಿನ ಬದಲಾವಣೆಯಿಂದ ವಿಪರೀತ ಕೀಡೆಗಳು ಬೆಳೆಯನ್ನು ತಿಂದು ಹಾಕಿವೆ. ಇದೀಗ ಮತ್ತೆ ನಿರಂತರವಾಗಿ ಮಳೆ ಬರುತ್ತಿರುವ ಕಾರಣ ಹೆಸರು, ಉದ್ದು, ಸೋಯಾಬಿನ್, ಹತ್ತಿ, ಗೋವಿನ ಜೋಳ ಪೂರ್ಣ ಹಾನಿಯಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಏನೆಲ್ಲಾ ಹಾನಿಯಾದರೂ ಉಸ್ತುವಾರಿ ಸಚಿವರು ಸೇರಿದಂತೆ ಆಡಳಿತ ಸರ್ಕಾರ ಬರೀ ಪ್ರವಾಸಿ ಮಂದಿರದಲ್ಲಿ ಸಭೆ ಮಾಡುತ್ತಾರೆಯೇ ಹೊರತು ಹೊಲಗಳಿಗೆ ಬಂದು ಪರಿಸ್ಥಿತಿ ಅರಿಯುತ್ತಿಲ್ಲ ಎಂದು ರೈತ ಮೋರ್ಚಾ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಸಕಾಲದಲ್ಲಿ ಬೆಳೆ ಪರಿಹಾರ ಹಾಗೂ ಮಧ್ಯಂತರ ಬೆಳೆ ವಿಮೆ ನೀಡದೇ ಇದ್ದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಮಾಡಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಪದಾಧಿಕಾರಿಗಳಾದ ನಾಗರಾಜ ಗುಂಜಾಳ, ಶಶಿಮೌಳಿ ಕುಲಕರ್ಣಿ, ಮೃತ್ಯುಂಜಯ ಹಿರೇಮಠ, ಪರಮೇಶ್ವರ ಕೋಯಪ್ಪನವರ, ದೇವರಾಜ ದಾಡಿಬಾವಿ, ಸಂತೋಷ ಜೀವನಗೌಡರ, ಮಂಜುನಾಥ ನೀರಲಕಟ್ಟಿ, ಬಸವರಾಜ ಜಾಬಿನ, ಶಂಕರ ಶೇಳಕೆ, ಈಶ್ವರಗೌಡ ಪಾಟೀಲ ಹಾಗೂ ಕೋಳಿವಾಡ ರೈತ ಮುಖಂಡರಿದ್ದರು.