ಕವಿವಿ ಸ್ನಾತಕೋತ್ತರ ಕೇಂದ್ರ, ನಾರಿಹಳ್ಳ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ ನಾಯಕವಿ.ಎಂ. ನಾಗಭೂಷಣ
ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜು ಅರಸು ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರ ಹಾಗೂ ನಾರಿಹಳ್ಳ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಇಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ:ಸಂಡೂರಿನ ದಿವಂಗತ ಎಂ.ವೈ. ಘೋರ್ಪಡೆಯವರ ದೂರದೃಷ್ಟಿಯಿಂದಾಗಿ ತಾಲೂಕಿನ ನಂದಿಹಳ್ಳಿಯಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ವಿಸ್ತಾರವಾದ ಜಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಭಾಗವಾಗಿ ಆರಂಭಿಸಲಾದ ಸ್ನಾತಕೋತ್ತರ ಕೇಂದ್ರಕ್ಕೆ ಅಂದಿನ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ. ದೇವರಾಜ ಅರಸು ಜ.೩೧, ೧೯೭೪ರಂದು ಶಂಕು ಸ್ಥಾಪನೆ ನೆರವೇರಿಸಿದ್ದರು.
ಪ್ರತಿ ವರ್ಷ ಈ ಕೇಂದ್ರದಲ್ಲಿ ನೂರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.
ತಾಲೂಕಿನ ತಾರಾನಗರದ ಬಳಿ ಇರುವ ನಾರಿಹಳ್ಳ ಜಲಾಶಯಕ್ಕೂ ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅ.೨೯, ೧೯೭೨ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ನಾರಿಹಳ್ಳ ಜಲಾಶಯದ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂದಿನ ಮೈಸೂರು ಸರ್ಕಾರದ ಹಣಕಾಸು ಮಂತ್ರಿಗಳಾಗಿದ್ದ ಎಂ.ವೈ. ಘೋರ್ಪಡೆ ವಹಿಸಿದ್ದರು.
ಸುತ್ತಲೂ ಹಸಿರುಟ್ಟ ಗುಡ್ಡಬೆಟ್ಟಗಳ ಮಧ್ಯದಲ್ಲಿ ನಿರ್ಮಿಸಲಾದ ಈ ಜಲಾಶಯವಿಂದು ಪ್ರಮುಖ ಆಕರ್ಷಣೀಯ ತಾಣವಾಗಿದೆ. ಸಮೀಪದ ಭೀಮತೀರ್ಥದ ಬಳಿಯ ಬೆಟ್ಟದ ಮೇಲಿಂದ ಈ ಜಲಾಶಯ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಚಾರಣಿಗರು ಹೆಚ್ಚಿನ ಸಂಖೆಯಲ್ಲಿ ಈ ಭಾಗಕ್ಕೆ ಬರುತ್ತಾರೆ.