ನಾಳೆಯಿಂದ ಗಣೇಶೋತ್ಸವ ಸಡಗರ...

KannadaprabhaNewsNetwork | Published : Sep 6, 2024 1:05 AM

ಸಾರಾಂಶ

ಬಹುತೇಕ ಸಾರ್ವಜನಿಕ ಗಣೇಶೋತ್ಸವ 11 ದಿನಗಳ ತನಕ ಅದ್ಧೂರಿಯಿಂದ ನಡೆಯುತ್ತವೆ. ಬಗೆ ಬಗೆಯ ಮಂಟಪಗಳ ಸಿದ್ಧತೆ ಆರಂಭಗೊಂಡಿದೆ.

ಕಾರವಾರ: ಗಣೇಶೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಚೌತಿ ಪೂಜೆಗೆ ಗಣಪತಿ ದೇವಾಲಯಗಳಲ್ಲಿ ತಯಾರಿ ನಡೆಯುತ್ತಿದ್ದರೆ, ಸಾರ್ವಜನಿಕ ಗಣೇಶೋತ್ಸವ ಮಂಟಪಗಳು ತಲೆ ಎತ್ತುತ್ತಿವೆ. ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೆ ಅಣಿಯಾಗಿವೆ. ಇಡಗುಂಜಿ ವಿನಾಯಕ ದೇವಾಲಯದಲ್ಲಿ ಸಾವಿರಾರು ಜನರು ಶ್ರದ್ಧೆ, ಭಕ್ತಿಯಿಂದ ದೇವರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಟನ್‌ಗಿಂತ ಹೆಚ್ಚು ಪಂಚಕಜ್ಜಾಯ ಮಾಡುವುದು ವಿಶೇಷವಾಗಿದೆ. ಗೋಕರ್ಣದ ಮಹಾಗಣಪತಿ ದೇವಾಲಯ, ಅಮದಳ್ಳಿಯ ವೀರಗಣಪತಿ, ಉಪ್ಪಿನ ಪಟ್ಟಣ ಸಿದ್ಧಿವಿನಾಯಕ ಹೀಗೆ ವಿವಿಧ ಮಹಾಗಣಪತಿ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಬೆಳಗ್ಗೆಯಿಂದ ಆರಂಭವಾಗಲಿದೆ. ಕೆಲವು ದೇವಾಲಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಬಹುತೇಕ ಸಾರ್ವಜನಿಕ ಗಣೇಶೋತ್ಸವ 11 ದಿನಗಳ ತನಕ ಅದ್ಧೂರಿಯಿಂದ ನಡೆಯುತ್ತವೆ. ಬಗೆ ಬಗೆಯ ಮಂಟಪಗಳ ಸಿದ್ಧತೆ ಆರಂಭಗೊಂಡಿದೆ. ಮಂಟಪಗಳನ್ನು ಶೃಂಗರಿಸಲು ವಿದ್ಯುದ್ದೀಪಗಳು ಸೇರಿದಂತೆ ಅಲಂಕಾರಿಕ ವಸ್ತುಗಳ ಮಾರಾಟ, ಖರೀದಿಯೂ ನಡೆಯುತ್ತಿದೆ. ಸಾರ್ವಜನಿಕ ಗಣೇಶೋತ್ಸವಗಳು ಸಾರ್ವಜನಿಕರ ಆಕರ್ಷಣೆಯ ಕೇಂದ್ರಗಳಾಗಲಿವೆ. ಕಲಾವಿದರ ಕೈಯಲ್ಲಿ ಆಕರ್ಷಕ ಗಣೇಶ ಮೂರ್ತಿಗಳು ತಲೆ ಎತ್ತಿವೆ. ವಿವಿಧ ಭಂಗಿಯಲ್ಲಿರುವ ಗಣೇಶ ಗಮನ ಸೆಳೆಯುತ್ತಿದೆ. ಹಲವೆಡೆ ಪೌರಾಣಿಕ, ಐತಿಹಾಸಿಕ ದೃಶ್ಯಗಳ ಪ್ರತಿಕೃತಿ ಮಾಡಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಸಾವಿರಾರು ಭಕ್ತರನ್ನು ಸೆಳೆಯುತ್ತಿದೆ. ಉತ್ತರ ಕನ್ನಡದಲ್ಲಿ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನನ್ನೇ ಪೂಜಿಸುವುದು ವಾಡಿಕೆ. ಆದರೂ ಬೇರೆಡೆಗಳಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಪಿಒಪಿ ಗಣಪತಿ ಮೂರ್ತಿಯನ್ನು ನಿಷೇಧಿಸಲಾಗಿದೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಆದೇಶಿಸಲಾಗಿದೆ. ಚಕ್ಕುಲಿ, ವಡೆ, ಉಂಡೆಗಳು, ಅತಿರಸ... ಹೀಗೆ ಬಗೆ ಬಗೆಯ ತಿಂಡಿಗಳು ಮನೆ ಮನೆಯಲ್ಲೂ ತಯಾರಾಗಿವೆ. ಅದರಲ್ಲೂ ಶಿರಸಿ, ಸಿದ್ದಾಪುರಗಳಲ್ಲಿ ಕೈಚಕ್ಕುಲಿ ವಿಶೇಷವಾಗಿದೆ. ಕೈ ಚಕ್ಕುಲಿ ಮಾಡುವುದರ ಜತೆ ಸ್ಪರ್ಧೆಯೂ ಗಮನ ಸೆಳೆದಿದೆ.ಗಣೇಶೋತ್ಸವದ ಸಡಗರಕ್ಕೆ ಊರುಗಳಿಗೆ ತೆರಳಬೇಕಾದ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ. ಹಾಗಿದ್ದರೂ ಬೆಂಗಳೂರಿನಿಂದ ಜಿಲ್ಲೆಗೆ ಬರಲು ಬಸ್‌ಗಳ ಕೊರತೆಯಾಗಿದೆ. ಖಾಸಗಿ ಬಸ್‌ಗಳ ದರದಲ್ಲಿ ಭಾರೀ ಏರಿಕೆಯಾಗಿದೆ. ರೈಲಿಗೂ ಟಿಕೆಟ್ ಸಿಗದೆ ಜನತೆ ಪರದಾಡುವಂತಾಗಿದೆ. ಗಣೇಶೋತ್ಸವದ ಭರಾಟೆ ಶುರುವಾಗಿದೆ. ಶನಿವಾರ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ದರ್ಶನ ನೀಡಲಿದ್ದಾನೆ.

Share this article