ಸಾಮೂಹಿಕ ಅತ್ಯಾಚಾರ, ತನಿಖೆ ಚುರುಕು

KannadaprabhaNewsNetwork |  
Published : Jan 13, 2024, 01:33 AM IST
ಅರೆಸ್ಟ್ | Kannada Prabha

ಸಾರಾಂಶ

ಹಾನಗಲ್ಲ ಪಟ್ಟಣದಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದು ಸಂತ್ರಸ್ತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿಗಳನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಹಾವೇರಿ: ಹಾನಗಲ್ಲ ಪಟ್ಟಣದಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದು ಸಂತ್ರಸ್ತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

ಅಫ್ತಾಬ್‌ ಮಕ್ಬೂಲ್‌ ಅಹ್ಮದ್ ಚಂದನಕಟ್ಟಿ, ಮದರಸಾಬ ಮಹಮದ್‌ ಇಸಾಕ ಮಂಡಕ್ಕಿ, ಅಬುಲ್ಲಾಖಾದರ್ ಜಾಫರ್‌ಸಾಬ್‌ ಹಂಚಿನಮನಿ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ೫ ದಿನ ಪೊಲೀಸ್‌ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ.

೭ ಜನ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆಯು ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದು, ಆ ಪ್ರಕಾರ ತ್ವರಿತ ತನಿಖೆ ಕೈಗೊಳ್ಳಲಾಗಿದೆ. ನೊಂದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಪಾಲ್ಗೊಂಡು ನಾಪತ್ತೆಯಾಗಿರುವ ಇತರ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಇನ್ನುಳಿದ ಆರೋಪಿತರನ್ನು ಆದಷ್ಟು ಬೇಗ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವೈಜ್ಞಾನಿಕವಾಗಿ ಹಾಗೂ ತ್ವರಿತವಾಗಿ ತನಿಖೆ ಕೈಗೊಂಡು ನಿಗದಿತ ಅವಧಿಯಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.

ಏನಾಗಿತ್ತು?: ಹಾನಗಲ್ಲಿನ ವಸತಿ ಗೃಹವೊಂದರಲ್ಲಿ ತಂಗಿದ್ದ ಅನ್ಯ ಕೋಮಿನ ಪುರುಷ ಮತ್ತು ಮಹಿಳೆ ಮೇಲೆ ದೌರ್ಜನ್ಯ ಎಸಗಿ ನೈತಿಕ ಪೊಲೀಸ್‌ಗಿರಿ ಮೆರೆದಿದ್ದ ಯುವಕರ ಗುಂಪು ಬಳಿಕ ಆ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ತಂಗಿದ್ದ ಶಿರಸಿ ಮೂಲದ ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆ ಮೇಲೆ ದಾಳಿ ನಡೆಸಿದ್ದ ೭ ಜನ ಯುವಕರ ಗುಂಪು ಬಳಿಕ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹಲ್ಲೆ ಮಾಡಿದ್ದ ವಿಡಿಯೋ ಬುಧವಾರ ಬೆಳಕಿಗೆ ಬಂದಿತ್ತು. ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಮಹಿಳೆ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಆಕೆಯ ಪತಿಯೂ ಸಹ ನನ್ನ ಪತ್ನಿಯನ್ನು ಕಿಡ್ನಾಪ್ ಮಾಡಿದ್ದ ಯುವಕರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದಿದ್ದರು.ಲಾಡ್ಜ್‌ಗೆ ನುಗ್ಗಿ ದಾಂಧಲೆ ನಡೆಸಿದ್ದ ಪುಂಡರ ಪ್ರಕರಣ ಬೇಧಿಸುತ್ತಿರುವ ಪೊಲೀಸರು ಲಾಡ್ಜ್‌ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದ್ದು, ಸಂತ್ರಸ್ತೆಯನ್ನು ಲಾಡ್ಜ್‌ನಿಂದ ಎಳೆತಂದು ಬಳಿಕ ಆಕೆ ಹಾಗೂ ಆ ವ್ಯಕ್ತಿಯನ್ನು ಬೈಕ್ ಮೇಲೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆದರೆ, ಆ ವ್ಯಕ್ತಿ ಇನ್ನೂ ಪತ್ತೆ ಆಗಿಲ್ಲ. ಪ್ರಕರಣದ ಕುರಿತು ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಗುರುವಾರ ಹಾನಗಲ್ಲ ನ್ಯಾಯಾಲಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ