ರೋಡ್‌ ಶೋ ನಡೆಸಿದ ಗ್ಯಾಂಗ್‌ ರೇಪಿಸ್ಟ್‌ಗಳು, ಮತ್ತೆ ಮೂವರ ಬಂಧನ

KannadaprabhaNewsNetwork |  
Published : May 25, 2025, 01:33 AM IST
24ಎಚ್‌ವಿಆರ್‌1 | Kannada Prabha

ಸಾರಾಂಶ

ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಹಾವೇರಿಯಿಂದ ಆರೋಪಿಗಳ ಹುಟ್ಟೂರು ಅಕ್ಕಿಆಲೂರಿನ ವರೆಗೆ ರೋಡ್‌ ಶೋ ನಡೆಸಿದ ಆರೋಪದಲ್ಲಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಎಲ್ಲ ಏಳು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಹಾವೇರಿ: ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಹಾವೇರಿಯಿಂದ ಆರೋಪಿಗಳ ಹುಟ್ಟೂರು ಅಕ್ಕಿಆಲೂರಿನ ವರೆಗೆ ರೋಡ್‌ ಶೋ ನಡೆಸಿದ ಆರೋಪದಲ್ಲಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಎಲ್ಲ ಏಳು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಅಫ್ತಾಬ್‌ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲನವರ್, ಮಹಮ್ಮದ್‌ ಸಾದಿಕ್ ಅಗಸಿಮನಿ, ಶೋಯಿಬ್ ಮುಲ್ಲಾ, ರಿಯಾಜ್ ಸಾವಿಕೇರಿ ಹಾಗೂ ತೌಸಿಫ್‌ ಚೋಟಿ ಬಂಧಿತ ಆರೋಪಿಗಳಾಗಿದ್ದಾರೆ. ಅವರೆಲ್ಲ ಗ್ಯಾಂಗ್‌ ರೇಪ್‌ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಜಾಮೀನು ನೀಡುವ ವೇಳೆ ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಲಾಗಿದೆ.

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಬೆಂಬಲಿಗರೊಂದಿಗೆ ಕೇಕೆ ಹಾಕುತ್ತ, ಘೋಷಣೆ ಕೂಗುತ್ತ ಕಾರು ಮತ್ತು ಬೈಕ್‌ಗಳಲ್ಲಿ ರೋಡ್‌ ಶೋ ನಡೆಸಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಶುಕ್ರವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಶನಿವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಅಲ್ಲದೇ ರೋಡ್‌ ಶೋನಲ್ಲಿ ಬಳಸಿದ್ದ ಎರಡು ಕಾರುಗಳನ್ನು ಹಾನಗಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾನಗಲ್ಲಿನಲ್ಲಿ 2024ರ ಜನವರಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಒಟ್ಟು 19 ಜನರನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ 12 ಮಂದಿ ಈ ಹಿಂದೆಯೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಮುಖ ಆರೋಪಿಗಳಾಗಿದ್ದ 7 ಜನರಿಗೆ ಮೇ 20ರಂದು ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನು ಸಿಕ್ಕಿ ಜೈಲಿನಿಂದ ಹೊರಬರುತ್ತಲೇ ಬೆಂಬಲಿಗರೊಂದಿಗೆ ಸೇರಿ ವಿಜಯೋತ್ಸವದ ರೀತಿಯಲ್ಲಿ ಮೆರವಣಿಗೆ ನಡೆಸಿರುವುದಕ್ಕೆ ರಾಷ್ಟ್ರಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಪೊಲೀಸ್‌ ತನಿಖೆಯಾಗಲಿ: 2024ರಲ್ಲಿ ಹಾನಗಲ್ಲನಲ್ಲಿ ಮಹಿಳೆ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣದ 7 ಆರೋಪಿಗಳಿಗೆ 2 ದಿನಗಳ ಹಿಂದಷ್ಟೇ ಜಾಮೀನು ಸಿಕ್ಕಿದೆ. ಬೇಲ್ ಸಿಕ್ಕ ತಕ್ಷಣ ಹಾವೇರಿಯಿಂದ ಅಕ್ಕಿಆಲೂರು ವರೆಗೆ ರೋಡ್‌ ಶೋ ಮಾಡಿದ್ದಾರೆ. ಅವರೆಲ್ಲ ಅತ್ಯಾಚಾರಿಗಳು, ಕ್ರೀಡೆಯಲ್ಲಿ ಗೆದ್ದವರಲ್ಲ. ಕ್ರಿಮಿನಲ್‌ಗಳು ಬೇಲ್ ಸಿಕ್ಕ ತಕ್ಷಣ ಮೆರವಣಿಗೆ ಮಾಡ್ತಾರೆ ಎಂದರೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಅಪರಾಧ ಪಶ್ಚಾತ್ತಾಪದ ಮನೋಭಾವನೆಯೂ ಇಲ್ಲ. ನಾವು ಏನ್ ಮಾಡಿದರೂ ಯಾರೂ ಏನು ಮಾಡಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಕೊಟ್ಟಿದ್ದೇನೆ. ಮೆರವಣಿಗೆ ಮಾಡಿದ ವಾಹನಗಳನ್ನ ಸೀಜ್‌ ಮಾಡಬೇಕಿತ್ತು. ಮೆರವಣಿಗೆ ಬಗ್ಗೆ ಪೊಲೀಸರಿಗೆ ಏನೂ ಮಾಹಿತಿ ಇರಲಿಲ್ಲವಾ? ಇದರಲ್ಲಿ ಮುಸ್ಲಿಂ ಮೌಲ್ವಿಗಳು, ಜಮಾಯತ್‌ವರು ಸಹಕರಿಸಿದ್ದಾರೆ ಎಂಬ ಶಂಕೆಯಿದೆ. ಈ ಬಗ್ಗೆಯೂ ಪೊಲೀಸ್ ತನಿಖೆ ಆಗಲಿ ಎಂದು ಅವರು ಆಗ್ರಹಿಸಿದ್ದಾರೆ.

ಜಾಮೀನು ರದ್ದುಪಡಿಸಲು ಮನವಿ: ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಯಾದ 7 ಆರೋಪಿಗಳು ಬೆಂಬಲಿಗರೊಂದಿಗೆ ಕಾರು ಮತ್ತು ಬೈಕ್‌ಗಳಲ್ಲಿ ರೋಡ್‌ ಶೋ ನಡೆಸಿ ಫಿರ್ಯಾದಿ ಮತ್ತು ಸಾಕ್ಷಿದಾರರಿಗೆ ಜೀವ ಬೆದರಿಕೆ ಹಾಕುವ ರೀತಿಯಲ್ಲಿ ಆರೋಪಿಗಳು ವರ್ತಿಸಿದ್ದಾರೆ. ಅಲ್ಲದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪಿತರ ಮೇಲೆ ಹಾನಗಲ್ಲ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಜಾಮೀನು ರದ್ದುಪಡಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹಾವೇರಿ ಎಎಸ್ಪಿ ಲಕ್ಷ್ಮಣ ಶಿರಕೋಳ ಹೇಳಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ