ಬಳ್ಳಾರಿ : ಮೇ 29ರಂದು ಶಾಲೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಅಂದೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಪೂರೈಕೆ ಮಾಡಲು ಪೂರಕ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಬೇಡಿಕೆಯ ಶೇ.70ರಷ್ಟು ಪುಸ್ತಕಗಳು ಗೋದಾಮಿಗೆ ಬಂದಿದ್ದು ತಾಲೂಕುಗಳಿಂದ ಕ್ಲಸ್ಟರ್‌ಗಳ ಮೂಲಕ ಆಯಾ ಶಾಲೆಗಳಿಗೆ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ.
ಈ ವಾರದೊಳಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪಠ್ಯಪುಸ್ತಕ ಪೂರೈಕೆಯಾಗಲಿವೆ. ಕಳೆದ ವರ್ಷ ಪಠ್ಯಪಸ್ತಕ ಹಾಗೂ ಸಮವಸ್ತ್ರ ತಡವಾಗಿ ಬಂದಿದ್ದವು. ಈ ಬಾರಿ ಶಾಲಾ ಶುರು ಮುನ್ನವೇ ಆಯಾ ಶಾಲೆಗಳಿಗೆ ಪುಸ್ತಕ ತಲುಪಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ 720 ಶಾಲೆಗಳಿದ್ದು, ಅನುದಾನಿತ 76, ಖಾಸಗಿ ಶಾಲೆಗಳು 439 ಹಾಗೂ ಇತರೆ 29 ಶಾಲೆಗಳಿವೆ. ಒಟ್ಟು ಜಿಲ್ಲೆಯಲ್ಲಿ 1264 ಶಾಲೆಗಳು ಶಿಕ್ಷಣ ನೀಡುತ್ತಿವೆ. ಈ ಪೈಕಿ ಒಟ್ಟು 2,80,140 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಯ 1,27,859 ವಿದ್ಯಾರ್ಥಿಗಳು, ಅನುದಾನಿತ 19,366, ಖಾಸಗಿ ಶಾಲೆಯ 1,24,148 ಹಾಗೂ ಇತರೆ ಶಾಲೆಗಳಲ್ಲಿ (ಮೊರಾರ್ಜಿ ದೇಸಾಯಿ ಮತ್ತಿತರ ವಸತಿ ಶಾಲೆಗಳು) 8767 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳು ಹೊರತುಪಡಿಸಿ ಉಳಿದೆಲ್ಲ ಶಾಲೆಗಳಲ್ಲಿ ಶಾಲೆ ಶುರು ದಿನವಾದ ಮೇ 29ರಿಂದಲೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಖಾಸಗಿ ಶಾಲೆಗಳಲ್ಲಿಲ್ಲ ಸರ್ಕಾರಿ ಪಠ್ಯ ಬಳಕೆ:
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಿಗೆ ನೀಡುವಂತೆ ರಾಜ್ಯಪಠ್ಯಕ್ರಮ ಅನುಸರಿಸುವ (ಸ್ಟೇಟ್ ಸಿಲಬಸ್) ಖಾಸಗಿ ಶಾಲೆಗಳಿಗೂ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುತ್ತದೆ. ಆದರೆ, ಖಾಸಗಿ ಶಾಲೆಗಳು ಒಂದರಿಂದ 5ನೇ ತರಗತಿವರೆಗೆ ಸಿಬಿಎಸ್‌ಇ ಮಾದರಿಯ ಪಠ್ಯಗಳನ್ನು ಬಳಕೆ ಮಾಡುತ್ತವೆ. ಇದರಿಂದ ಶಿಕ್ಷಣ ಇಲಾಖೆ ನೀಡಿದ ಪಠ್ಯಗಳನ್ನು ಶಾಲೆಯ ಮೂಲೆ ಸೇರುತ್ತವೆ. ಅಧಿಕಾರಿಗಳು ತಪಾಸಣೆಗೆ ಬಂದಾಗ ಕಿರಿಕಿರಿ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಕೆಲವು ಶಾಲೆಗಳು ಸಿಬಿಎಸ್‌ಇ ಮಾದರಿಯ ಪಠ್ಯಗಳ ಜೊತೆಗೆ ಶಿಕ್ಷಣ ಇಲಾಖೆ ನೀಡಿದ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತವೆಯಾದರೂ ನಿತ್ಯ ಪಠ್ಯ ಚಟುವಟಿಕೆಗಳಿಗೆ ತಮ್ಮದೇ ಆದ ಪಠ್ಯಗಳನ್ನು ಖಾಸಗಿ ಶಾಲೆಗಳು ಬಳಕೆ ಮಾಡುತ್ತವೆ.
ಈ ಮೊದಲು ರಾಜ್ಯ ಪಠ್ಯಕ್ರಮ ಅನುಸರಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಹೀಗಾಗಿ ಅಧಿಕಾರಿಗಳು ಭೇಟಿಗೆ ಬಂದಾಗ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಖಾಸಗಿ ಶಾಲೆಗಳು ನಿತ್ಯ ಬೋಧಿಸುವ ಸಿಬಿಎಸ್‌ಸಿ ಮಾದರಿಯ ಪಠ್ಯಪುಸ್ತಕಗಳ ಜೊತೆಗೆ ಶಿಕ್ಷಣ ಇಲಾಖೆ ನೀಡುವ ಪುಸ್ತಕಗಳನ್ನು ಸಹ ವಿದ್ಯಾರ್ಥಿಗಳ ಬ್ಯಾಗಿನಲ್ಲಿರಿಸಿ, ಅಧಿಕಾರಿಗಳ ಶಿಸ್ತುಕ್ರಮದಿಂದ ಸುಲಭವಾಗಿ ಪಾರಾಗುತ್ತಿವೆ. ಖಾಸಗಿ ಶಾಲೆಗಳಿಗೆ ಪೂರೈಕೆಗೆ ವಿತರಣೆ ಮಾಡುವ ಪುಸ್ತಕಗಳ ಪೈಕಿ ಶೇ.80ರಷ್ಟು ಪುಸ್ತಕಗಳು ಸಹ ಈಗಾಗಲೇ ಗೋದಾಮಿನಲ್ಲಿರಿಸಲಾಗಿದೆ. ಶಾಲೆ ಶುರು ಬಳಿಕ ಖಾಸಗಿ ಶಾಲೆಗಳು ಪುಸ್ತಕಗಳನ್ನು ತೆಗೆದುಕೊಂಡು ಹೋಗಲಿದ್ದಾರೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.
ಫಲಿತಾಂಶ ಕಡಿಮೆ ಬಂದ ಶಾಲೆಗಳಿಗೆ ನೊಟೀಸ್ ಬಿಸಿ:
ಮೇ 29ರಿಂದ ಶಾಲೆಗಳು ಆರಂಭಗೊಳ್ಳಲಿದ್ದು, ಅಂದಿನಿಂದಲೇ ದಾಖಲಾಗಿ ಆಂದೋಲನ ಶುರುಗೊಳಿಸುತ್ತೇವೆ.
ಈ ಬಾರಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ಇರಿಸಿ, ಶೈಕ್ಷಣಿಕ ಪ್ರಗತಿಗೆ ಪೂರಕ ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಉಮಾದೇವಿ ಹೇಳಿದರು.
ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ತೀವ್ರ ಕುಸಿತ ಕಂಡಿರುವುದರಿಂದ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ಕ್ರಿಯಾ ಯೋಜನೆ ರೂಪಿಸಿಕೊಳ್ಳಲಾಗಿದೆ. ಶಾಲೆ ಆರಂಭ ದಿನದಿಂದಲೇ ಮಕ್ಕಳಿಗೆ ವಿಶೇಷ ತರಗತಿಯನ್ನು ಆರಂಭಿಸಲಾಗುವುದು. ಎಸ್ಸೆಸ್ಸೆಲ್ಸಿ ಫಲಿತಾಂಶ ಅತ್ಯಂತ ಕಡಿಮೆ ಬಂದಿರುವ ಶಾಲೆಯ ಮುಖ್ಯಗುರುಗಳಿಗೆ ಈಗಾಗಲೇ ನೊಟೀಸ್ ಜಾರಿಗೊಳಿಸಿದ್ದೇವೆ. ಅದಕ್ಕೆ ಅವರು ಸಮರ್ಪಕ ಉತ್ತರ ನೀಡಬೇಕು. ಇಲ್ಲದಿದ್ದರೆ ಮುಂದಿನ ಹಂತದ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.