ಹಾನಗಲ್ಲ: ಹದಿನೈದು ವರ್ಷಗಳ ಸುದೀರ್ಘ ಪರಿಶ್ರಮದ ಫಲವಾಗಿ ದಾನಿಗಳು, ಸಮಾಜ ಬಂಧುಗಳ ಸಹಕಾರದಿಂದ ಶ್ರೀ ಗಂಗಾಮತ ಸಮಾಜ ಸೇವಾ ಸಂಸ್ಥೆಯ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನ ಲೋಕಾರ್ಪಣೆಗೊಳ್ಳುತ್ತಿದೆ.
ನಾರಾಯಣಗೌಡ ಪಾಟೀಲ ಗಂಗಾಮತ ಸಮುದಾಯದ ತಾಲೂಕು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇಂಥದ್ದೊಂದು ಸಮುದಾಯ ಭವನ ನಿರ್ಮಾಣದ ಕನಸು ಹೊತ್ತು, ಅದೇ ಸಮಯಕ್ಕೆ ಚಂದ್ರಾಬಾಯಿ ರಾಮಣ್ಣ ಮಲಗುಂದ ಅವರು ನೀಡಿದ ೧೫ ಗುಂಟೆ ಹಾಗೂ ಚಂದ್ರಕಲಾ ಶಿವಪುತ್ರಪ್ಪ ಶೇಷಗಿರಿ ಅವರು ನೀಡಿದ ೩ ಗುಂಟೆ ಜಾಗದಲ್ಲಿ ಈಗ ಸುಸಜ್ಜಿತ ಸಮುದಾಯ ಭವನ ಲೋಕಾರ್ಪಣೆಯಾಗುತ್ತಿದೆ.
ಅಂದಾಜು ₹೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಭವನಕ್ಕೆ ಮೊಟ್ಟಮೊದಲು ಸರ್ಕಾರದ ಅನುದಾನ ₹೪೫ ಲಕ್ಷ ನೀಡಿ ಚಾಲನೆ ಕೊಟ್ಟವರು ಮಾಜಿ ಸಚಿವ ಸಿ.ಎಂ. ಉದಾಸಿ ಅವರಾಗಿದ್ದಾರೆ. ಆನಂತರ ಶಾಸಕರಾಗಿದ್ದ ಮನೋಹರ ತಹಶೀಲ್ದಾರ ಅವರು ₹೭೦ ಲಕ್ಷ ಅನುದಾನ ನೀಡಿದರು. ಈಗಿನ ಶಾಸಕ ಶ್ರೀನಿವಾಸ ಮಾನೆ ಅವರು ₹೧೮ ಲಕ್ಷ ಅನುದಾವನ್ನು ಸರ್ಕಾರದಿಂದ ಕೊಡಿಸಿದ್ದಾರೆ. ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಕೂಡ ಅನುದಾನದ ಭರವಸೆ ನೀಡಿದ್ದಾರೆ.ಉಚಿತ ಭವನ ಯೋಜನೆ: ಈ ಸಮುದಾಯ ಭವನ ಕೇವಲ ಗಂಗಾಮತ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಸಮುದಾಯಗಳ ಸಮಾಜಮುಖಿ ಹಾಗೂ ಮಂಗಲ ಕಾರ್ಯಗಳಿಗೆ ಸೂಕ್ತ ಭವನವಾಗಿದೆ. ಮುಂಗಡವಾಗಿ ₹೨೫ ಸಾವಿರ ದೇಣಿಗೆ ನೀಡಿದವರಿಗೆ ಒಂದು ದಿನದ ಕಾರ್ಯಕ್ರಮ ಅಥವಾ ಮದುವೆ ಮಂಗಲ ಕಾರ್ಯಕ್ಕೆ ಉಚಿತವಾಗಿ ಭವನ ನೀಡುವ ಯೋಜನೆಯಲ್ಲಿ ೨೦೦ ಜನರಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ೧೨೦ ಜನ ವಿವಿಧ ಸಮುದಾಯದವರು ಈ ಯೋಜನೆಯಲ್ಲಿ ಸಹಾಯಹಸ್ತ ನೀಡಿದ್ದರಿಂದ ₹೩೦ ಲಕ್ಷ ಸಂಗ್ರಹವಾಗಿದೆ. ಇನ್ನೂ ೭೦ ಜನರಿಗೆ ಮಾತ್ರ ಇಂಥ ಅವಕಾಶವಿದೆ. ಇದರೊಂದಿಗೆ ಸಮುದಾಯದ ಬಂಧುಗಳು ನಿರಂತರವಾಗಿ ಈ ಸಮುದಾಯ ಭವನಕ್ಕೆ ತನು, ಮನ, ಧನದ ಸಹಾಯ ಸಹಕಾರ ನೀಡಿದ್ದರಿಂದ ₹೨ ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣವಾಗಿದೆ.
೪೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗಂಗಾಮತ ಸಮುದಾಯ ಒಟ್ಟಾಗಿ ಸಮಾಜಮುಖಿಯಾಗಿ ಎಲ್ಲರ ಹಿತ ಕಾಯುವ ಸಮಾಜವಾಗಿ ನಿಲ್ಲಲು ಈ ಭವನ ನಮಗೆ ಕೇಂದ್ರ ಸ್ಥಳ ಎನ್ನುತ್ತಾರೆ ಇದರ ಉಸ್ತುವಾರಿ ಸಂಘಟಕರು.