30 ರಿಂದ ಕನ್ನೂರಿನಲ್ಲಿ ಗಣಪತರಾವ ಮಹಾರಾಜರ ಜನ್ಮ ಮಹೋತ್ಸವ ಸಪ್ತಾಹ

KannadaprabhaNewsNetwork |  
Published : Aug 26, 2024, 01:41 AM IST
ಆ.30 ರಿಂದ ಕನ್ನೂರಿನಲ್ಲಿ ಗಣಪತರಾವ ಮಹಾರಾಜರ ಜನ್ಮ ಮಹೋತ್ಸವ ಸಪ್ತಾಹ | Kannada Prabha

ಸಾರಾಂಶ

ತಾಲೂಕಿನ ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ಶ್ರೀ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಸಪ್ತಾಹವನ್ನು ಇದೇ ಆ.30 ರಿಂದ ಸೆ.7 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನೂರಿನಲ್ಲಿರುವ ಶಾಂತಿಕುಟೀರ ಟ್ರಸ್ಟ್‌ನ ಹಿರಿಯ ಸದಸ್ಯ ರಮೇಶ ಕನ್ನೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಲೂಕಿನ ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ಶ್ರೀ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಸಪ್ತಾಹವನ್ನು ಇದೇ ಆ.30 ರಿಂದ ಸೆ.7 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನೂರಿನಲ್ಲಿರುವ ಶಾಂತಿಕುಟೀರ ಟ್ರಸ್ಟ್‌ನ ಹಿರಿಯ ಸದಸ್ಯ ರಮೇಶ ಕನ್ನೂರ ಹೇಳಿದರು.

ನಗರದ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಾತ್ಮ ಸಾಧನಕ್ಕೆ ಕನ್ನೂರಲ್ಲಿ ಶಾಂತಿಕುಟೀರ, ಆಧ್ಯಾತ್ಮಾಧಾರಿತ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಭಾರತೀಯ ಸುರಾಜ್ಯ ಸಂಸ್ಥೆಯನ್ನು ಸ್ಥಾಪಿಸಿದ ಗಣಪತರಾವ ಮಹಾರಾಜರು, ಆ ಮೂಲಕ ಸಮಾಜ ಸುಧಾರಣೆಯ ಅನೇಕ ಕಾರ್ಯಗಳನ್ನು ಮಾಡಿದ್ದಾರೆ ಎಂದರು.ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕೃಷ್ಣ ಸಂಪಗಾವಕಾರ ಮಾತನಾಡಿ, ಪ್ರತಿ 5 ವರ್ಷಗಳಿಗೊಮ್ಮೆ ದೊಡ್ಡ ಪ್ರಮಾಣದಲ್ಲಿ 9 ದಿನಗಳ ಕಾಲ ಸಪ್ತಾಹ ನಡೆಯುತ್ತದೆ. ಈ ವೇಳೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗುಜರಾತನಿಂದ ಅಸಂಖ್ಯಾತ ಭಕ್ತರು ಬರುತ್ತಾರೆ. ಈಗಾಗಲೇ ಮಹಾರಾಜರ ಪುಸ್ತಕಗಳನ್ನು ಡಿಜಿಟೈಲೇಜಷನ್ ಮಾಡುತ್ತಿದ್ದು, ಕನ್ನಡ, ಇಂಗ್ಲಿಷ್, ಮರಾಠಿ, ಸಂಸ್ಕೃತ ಸೇರಿದಂತೆ 12 ಭಾಷೆಗಳಲ್ಲಿ ಪುಸ್ತಕಗಳಿವೆ. ಈ ಬಾರಿಯೂ ಸಹ ಸಪ್ತಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸಬೇಕು ಎಂದರು.ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದಲಾಲ ಬಾಹೇತಿ ಮಾತನಾಡಿ, ಸಪ್ತಾಹದ ಅಂಗವಾಗಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಸಪ್ತಾಹದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಾನಾ ಕಡೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಒಂಭತ್ತು ದಿನಗಳ ಕಾಲ ಶಾಂತಿಕುಟೀರದಲ್ಲಿ ನಡೆಯುವ ಸಪ್ತಾಹ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.ಗೋಷ್ಠಿಯಲ್ಲಿ ಟ್ರಸ್ಟಿ ಡಾ.ಸತೀಶ ಕನ್ನೂರ, ಖಾಜಾಂಚಿ ಸತೀಶ ತಿಕೋಟಿ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಬಾಹಿತಿ ಉಪಸ್ಥಿತರಿದ್ದರು.ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅನೇಕ ಶಿಷ್ಯರನ್ನು ಹೊಂದಿರುವ ಗಣಪತರಾವ್ ಮಹಾರಾಜರು ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವು ಉಳ್ಳವರಾಗಿದ್ದರು. ತಮ್ಮ 94ನೇ ವಯಸ್ಸಿನಲ್ಲಿ ಸುಲಭ ಆತ್ಮಜ್ಞಾನ ಎಂಬ ಮೇರುಗ್ರಂಥವನ್ನು ರಚಿಸಿದ ಹೆಗ್ಗಳಿಕೆ ಅವರದು. ಈ ಹೊತ್ತಿಗೆಯಲ್ಲಿ ಶ್ರುತಿ ಶಾಸ್ತ್ರಗಳಿಗೂ ವರ್ಣಿಸಲು ಕಠಿಣವಾದ ಉಚ್ಚತಮ ವೇದಾಂತವನ್ನು ನೀರು ಕುಡಿದಷ್ಟು ಸರಳ ಭಾಷೆಯಲ್ಲಿ ವಿವಿರಿಸಿರುವುದು ಅವರ ಆಧ್ಯಾತ್ಮದ ಮೇರು ವ್ಯಕ್ತಿತ್ವಕ್ಕೆ ಒಂದು ನಿದರ್ಶನವಾಗಿದೆ. ಅಂಥ ಸದ್ಗುರುಗಳ ಜನ್ಮ ಮಹೋತ್ಸವ ಸಪ್ತಾಹವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಶಾಂತಿಕುಟೀರ ಟ್ರಸ್ಟ್ ಕಮಿಟಿ ನಿರ್ಧರಿಸಿದೆ.

-ರಮೇಶ ಕನ್ನೂರ, ಕನ್ನೂರಿನಲ್ಲಿರುವ ಶಾಂತಿಕುಟೀರ ಟ್ರಸ್ಟ್‌ನ ಹಿರಿಯ ಸದಸ್ಯರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ