ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿಂಗಸುಗೂರು ನಗರ ಹಾಗೂ ಆನಾಹೊಸೂರು, ಈಚನಾಳ, ರೋಡಲಬಂಡಾ (ಕ್ಯಾಂಪ್), ಗೊರೇಬಾಳ, ಹಾಲಬಾವಿ, ಸರ್ಜಾಪುರ, ಹೊನ್ನಳ್ಳಿ, ನೀರಲಕೇರಿ, ಚಿತ್ತಾಪುರ, ನರಕಲದಿನ್ನಿ, ಮಾವಿನಬಾವಿ, ಕಾಚಾಪುರ, ಕಾಳಾಪುರ, ಗುಂತಗೋಳ, ಹುನಕುಂಟಿ ಸೇರಿದಂತೆ ವಿಘ್ನವಿನಾಶಕ ವಿನಾಯಕನ ಮೂರ್ತಿ ಪ್ರತಿಷ್ಟಾಪನೆ ಮಾಡಿದ ಮಂಡಳಿಗಳು ಭಕ್ತಿಯ ಪೂಜೆ ಸಲ್ಲಿಸಿ ಧಾರ್ಮಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಸುತ್ತಿದ್ದಾರೆ.
ಪಟ್ಟಣದಲ್ಲಿ ಪ್ರಮುಖವಾಗಿ ದೊಡ್ಡ ಅಂಜನೇಯ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಿ ಪ್ರತಿಷ್ಟಿತ ಹಿಂದು ಮಹಾ ಗಣಪತಿ, ಖೋ ಖೋ ಬಾಯ್ಸ್ ಗಣೇಶ, ಭಗತ್ ಸಿಂಗ್ ಯುವಕ ಸಂಘದ ಗಣೇಶ, ಸಾಯಿನಗರದ ಗಣೇಶ, ಸ್ವಾಮಿ ವಿವೇಕಾನಂದ ಯುವಕ ಸಂಘದ ಗಣೇಶ, ಭಗೀರಥ ಕಾಲೊನಿ ಗಣೇಶ, ಡಾಲರ್ಸ್ ಕಾಲೊನಿ ಗಣಪತಿ, ಶ್ರೀರಾಮ ಯುವಕ ಸಂಘದ ಗಣೇಶ, ರೇಣುಕಾ ನಗರದ ಶ್ರೀಕೃಷ್ಣ ಯುವಕ ಮಂಡಳಿ ಗಣೇಶ ಭಾರಿ ಗಾತ್ರ, ಆಕರ್ಷಕ, ಅಂದದ ಗಣೇಶ ಮೂರ್ತಿಗಳ ಪ್ರತಿಸ್ಟಾಪನೆ ಚತುರ್ಥಿಯ ಸಡಗರ-ಸಂಭ್ರಮ ಇಮ್ಮಡಿಗೊಳಿಸಿದೆ.ಹಿಂದು ಮಹಾಗಣಪತಿ ಉತ್ಸವ ಸಮಿತಿ ಪಟ್ಟಣ ಮುಖ್ಯ ರಸ್ತೆಯಲ್ಲಿ ಸಂತರು, ಶರಣರು, ಕಾಯಕ ಜೀವಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರು ಸೇರಿದಂತೆ ಪ್ರಮುಖರ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಬಾಕ್ಸ್
ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 130ಕ್ಕೂ ಅಧಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಲಾಗಿದೆ. ಈ ಪೈಕಿ 2ನೇ ದಿನ 25, 3ನೇ ದಿನ 38, 4ನೇ ದಿನ 05, 5ನೇ ದಿನ 40, 7ನೇ ದಿನ 18, 9ನೇ ದಿನ 6 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತಿದೆ. ಬಲದಂಡೆ ನಾಲೆ, ಕೃಷ್ಣಾನದಿ ಸೇರಿದಂತೆ ಆಡಳಿತ ನಿಗದಿ ಪಡಿಸಿದ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಇದಕ್ಕಾಗಿ ಸೂಕ್ತ ಮುಂಜಾಗ್ರತೆ ವಹಿಸಲಾಗಿದೆ.
ಲಿಂಗಸುಗೂರಲ್ಲಿ ಗಣೇಶ ಚತುರ್ಥಿ ವಿಜೃಂಭಣೆಯಿಂದ ಜರುಗುತ್ತದೆ. ಯುವಕರು ಉತ್ಸಾಹದಿಂದ ಹಬ್ಬದಾಚರಣೆ ಮಾಡುತ್ತಾರೆ. ಪಟ್ಟಣದಲ್ಲಿ ಗಣೇಶ ಚತುರ್ಥಿ ಅಂಗನವಾಗಿ ಅನ್ನ ಪ್ರಸಾದ, ವಿದ್ಯುತ್ ದೀಪಾಲಂಕಾರ, ಬ್ಯಾನರ್, ಕಟೌಟ್, ಬಟ್ಟಿಂಗ್ಸ್, ಧ್ವಜಗಳು, ಸಮವಸ್ತ್ರಗಳಿಂದ ಹಬ್ಬ ಕಂಗೊಳಿಸುತ್ತಿದೆ ಎಂದು ಲಿಂಗಸುಗೂರು ಹಿಂದೂ ಮಹಾಗಣಪತಿ ಯುವಕ ಸಂಘದ ಸೋಮು ನಾಯಕ ಹೇಳಿದರು.