ಮಂಜೂರಾದರೂ ಪರಿಹಾರ ನೀಡದ ಜಿಲ್ಲಾಡಳಿತ ವಿರುದ್ಧ ಗಂಟಿಹೊಳೆ ಗರಂ

KannadaprabhaNewsNetwork |  
Published : Jan 18, 2025, 12:50 AM IST
17ಗುರು | Kannada Prabha

ಸಾರಾಂಶ

ಇತ್ತೀಚಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ನಾರಾಯಣ ಮೋಗವೀರ ಅವರ ಕುಟುಂಬದ ನೋವನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಮೀನುಗಾರ ಸಂಕಷ್ಟ ಪರಿಹಾರ ನಿಧಿಯಡಿ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇತ್ತೀಚಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ನಾರಾಯಣ ಮೋಗವೀರ ಅವರ ಕುಟುಂಬದ ನೋವನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಮೀನುಗಾರ ಸಂಕಷ್ಟ ಪರಿಹಾರ ನಿಧಿಯಡಿ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ಆಗ್ರಹಿಸಿದ್ದಾರೆ.

ಉಡುಪಿ ಜಿ.ಪಂ. ಸಭಾಂಗಣದಲ್ಲಿ ಜಿಪಂ ಮು.ಕಾ.ನಿ.ಅಧಿಕಾರಿ ಮತ್ತು ಇಲಾಖೆಯ ಇತರ ಅಧಿಕಾರಿಗಳೊಂದಿಗೆ ನಡೆದ ಬೈಂದೂರು ಕ್ಷೇತ್ರದ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಚರ್ಚೆಯ ವೇಳೆ ಶಾಸಕ ಗುರುರಾಜ್‌ ಗಂಟಿಹೊಳೆ ಬಡ ಮೀನುಗಾರರ ನೋವಿಗೆ ಸ್ಪಂದಿಸದ ಜಿಲ್ಲಾಡಳಿತ ನಿರ್ಲಕ್ಷದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜ. 2 ರಂದು ಪರ್ಸಿನ್ ಬೋಟ್‌ನಲ್ಲಿ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆ ಆಗಿರುವ ಬಡ ಮೀನುಗಾರರಾದ ನಾರಾಯಣ ಮೊಗವೀರ ಅವರ ಸುಳಿವು ಸಿಗದೇ ಇರುವುದು ಅತ್ಯಂತ ದುಃಖದಾಯಕ ಸಂಗತಿ. ಅವರ ಮನೆಗೆ ತೆರಳಿ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದೇನೆ. ನಾಪತ್ತೆಯಾಗಿರುವ ಅವರನ್ನು ಹುಡುಕಲು ಜಿಲ್ಲಾಡಳಿತಕ್ಕೆ ಹಾಗೂ ಸಂಬಂದಿಸಿದ ಇಲಾಖೆಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಈವರೆಗೂ ಮೀನುಗಾರರನ್ನು ಹುಡುಕಲು ಇಲಾಖೆ ಹಾಗೂ ಜಿಲ್ಲಾಡಳಿತ ಅಗತ್ಯ ಮುತುವರ್ಜಿ ವಹಿಸದೇ ಇರುವುದು ಖಂಡನೀಯ ಎಂದರು.

ಮೀನುಗಾರರ ಸಂಕಷ್ಟ ಸಮಯದಲ್ಲಿಯೇ ಬಳಕೆಯಾಗುವ ಸಂಕಷ್ಟ ಪರಿಹಾರ ನಿಧಿಯಡಿ 10 ಲಕ್ಷ ರು. ತುರ್ತು ಪರಿಹಾರ ನೀಡಲು ಜ. 10 ರಂದೇ ಆದೇಶ ಪತ್ರ ಬಂದಿದ್ದರೂ, 7 ದಿನ ಕಳೆಯುತ್ತಾ ಬಂದರೂ ಈವರೆಗೂ ನೊಂದವರ ಮನೆ ಬಾಗಿಲಿಗೆ ತೆರಳಿ ಚೆಕ್ ವಿತರಿಸುವ ಹಾಗೂ ನಿಮ್ಮ ಸಂಕಷ್ಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಹೇಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೆರಡು ದಿನದಲ್ಲಿ ಪರಿಹಾರ ಮೊತ್ತದ ಚೆಕ್‌ನ್ನು ನೊಂದ ಕುಟುಂಬಕ್ಕೆ ನೀಡಬೇಕು. ಆ ಮೂಲಕ ಮನೆಯ ಯಜಮಾನನನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ನೆರವು ನೀಡಬೇಕು. ಇದು ಆಗದೇ ಇದ್ದಲ್ಲಿ ಪ್ರತಿಭಟಿಸಿಯಾದರೂ ಆ ಕುಟುಂಬಕ್ಕೆ ನ್ಯಾಯ ಒದಗಿಸಲು ಸಿದ್ದನಿದ್ದೇನೆ ಎಂದು ಎಚ್ಚರಿಕೆ ನೀಡಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌