ಬಾಬಾಬುಡನ್ ಗಿರಿಯಲ್ಲಿ ಮುಸ್ಲಿಂ ಬಾಂಧವರಿಂದ ಗ್ಯಾರವಿ ಹಬ್ಬ ಆಚರಣೆ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಕರ್ನಾಟಕ ರಾಜ್ಯ ಹಜ಼ರತ್ ಟಿಪ್ಪು ಸುಲ್ತಾನ್‌ರ ಅಭಿಮಾನಿಗಳ ಮಹಾ ವೇದಿಕೆ ಆಶ್ರಯದಲ್ಲಿ ಹಿಂದೂ, ಮುಸಲ್ಮಾನರ ಭಾವೈಕ್ಯತಾ ಕೇಂದ್ರ ಬಾಬಾಬುಡನ್ ಗಿರಿ ದರ್ಗಾದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸಂಕೇತ ವಾಗಿ ಚಿಕ್ಕಮಗಳೂರಿನ ಮುಸಲ್ಮಾನ ಬಾಂಧವರು ಗ್ಯಾರವಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.

- ರಾಜ್ಯ ಹಜ಼ರತ್ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾ ವೇದಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಿಂದೂ, ಮುಸಲ್ಮಾನರ ಭಾವೈಕ್ಯತಾ ಕೇಂದ್ರ ಬಾಬಾಬುಡನ್ ಗಿರಿ ದರ್ಗಾದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸಂಕೇತ ವಾಗಿ ಚಿಕ್ಕಮಗಳೂರಿನ ಮುಸಲ್ಮಾನ ಬಾಂಧವರು ಗ್ಯಾರವಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.

ಕರ್ನಾಟಕ ರಾಜ್ಯ ಹಜ಼ರತ್ ಟಿಪ್ಪು ಸುಲ್ತಾನ್‌ರ ಅಭಿಮಾನಿಗಳ ಮಹಾ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯ ಕ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಹೊರ ಜಿಲ್ಲೆಗಳ ಸಾವಿರಾರು ಭಕ್ತರು ಹಬ್ಬದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

ಹಿಂದೂ, ಮುಸಲ್ಮಾನರ ಭಾವೈಕ್ಯತೆ ಕೇಂದ್ರವಾದ ಬಾಬಾಬುಡನ್ ದರ್ಗಾದಲ್ಲಿ ಹಿಂದೂ, ಮುಸಲ್ಮಾನರ ಧಾರ್ಮಿಕ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಬೇಕು, ಎಲ್ಲರೂ ಒಂದಾಗಿ ಬಾಳಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಪ್ರಪಂಚದ ಮಾನವ ಕುಲಕ್ಕೂ, ಸಕಲ ಜೀವ ರಾಶಿಗಳಿಗೂ ಒಳಿತಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ ಎಂದು ಕರ್ನಾಟಕ ರಾಜ್ಯ ಹಜ಼ರತ್ ಟಿಪ್ಪೂ ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾಧ್ಯಕ್ಷ ಜಂಷೀದ್‌ಖಾನ್ ಹೇಳಿದರು.

ಬೆಳಿಗ್ಗೆ 11ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರದ ಫಕೀರರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ವಿವಿಧ ಮಸೀದಿಗಳ ಗುರುಗಳು ಸೇರಿದಂತೆ ಬಳ್ಳಾರಿಯಿಂದ ಆಗಮಿಸಿದ್ದ ಮುಫ್ತಿ ಸೌಫಿ ಮೌಲಾನ ಇರ್ಷಾದ್ ಗುರುಗಳ ಸಮ್ಮುಖ ದಲ್ಲಿ ಗಿರಿಯ ಗುಹೆಯೊಳಗೆ ಹೂವುಗಳನ್ನು ಸಮರ್ಪಿಸಿ, ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥನೆ ಮಾಡಲಾಯಿತು. ಗಿರಿ ಪ್ರದೇಶದಲ್ಲಿರುವ ಕೆಲವು ಕಾಫಿ ಬೆಳೆಗಾರರು ತಾವುಗಳು ತಂದಿದ್ದ ಕಾಫಿ ಬೀಜಗಳನ್ನು ಜಮಾಲ್ ಶಾ ಮಕ್ರುಬಿ, ಕಮಾಲ್ ಶಾ ಮಕ್ರುಬಿ ಮಹಾಗುರುಗಳ ಪಾದಕ್ಕೆ ಸಮರ್ಪಿಸಿದರು. ಬಾಬಾಬುಡನ್ ಗಿರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾಖಾದ್ರಿ ಹಾಗೂ ಬಳ್ಳಾರಿ ಸೂಫಿ ಗುರುಗಳಾದ ಶಮೀರ್ ಶೇಠ್ ಖಲಂದರ್, ಜಸ್ತೀಸ್ ಸಾಬ್ರಿ ಮತ್ತು ಚಿಕ್ಕಮಗಳೂರು ನಗರದ ಮಹಮ್ಮದ್ ಹಾಗೂ ಹಲವು ಭಕ್ತರು ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿರು.

ಮುಜುರಾಯಿ ಇಲಾಖೆಯಿಂದ ಸರ್ಕಾರ ರಚಿಸಿರುವ ವ್ಯವಸ್ಥಾಪನಾ ಸಮಿತಿ ರದ್ದುಗೊಳಿಸಿ, ಸರ್ವಧರ್ಮೀಯರಿಗೂ ಒಂದೇ ರೀತಿ ಮುಕ್ತವಾದ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಜಂಷೀದ್ ಖಾನ್ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಹಜ಼ರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಕಾರ್ಯಕರ್ತರಾದ ಸಜೀಲ್ ಅಹಮ್ಮದ್, ಸೈಯದ್ ಹಬೀದ್ ರಿಜ್ವಾನ್, ಆಸಿಫ್, ಅಬ್ದುಲ್ ರೆಹಮಾನ್, ತನ್ವೀರ್ ಮತ್ತು ರಾಘವೇಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

9 ಕೆಸಿಕೆಎಂ 1ಬಾಬಾಬುಡನ್ ಗಿರಿಯಲ್ಲಿ ಮುಸ್ಲಿಂ ಬಾಂಧವರಿಂದ ಗ್ಯಾರವಿ ಹಬ್ಬ ಆಚರಣೆ ನಡೆಯಿತು.

Share this article