ಕನ್ನಡಪ್ರಭ ವಾರ್ತೆ ವಿಜಯಪುರ
ತೊಗರಿ ಬೀಜ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಕ್ರಮಕ್ಕೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಿಂದ ಲೋಕಾಯುಕ್ತ ಕಚೇರಿವರೆಗೆ ಎತ್ತಿನ ಬಂಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು ಒಂದೊಂದು ಗ್ರಾಮದಿಂದ ತೊಗರಿ ಕಳಪೆ ಬೀಜ ವಿತರಣೆ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.ಈ ವೇಳೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕಳಪೆ ತೊಗರಿ ಬೀಜ ಪೂರೈಕೆ ಮಾಡಿದ್ದರಿಂದ, ಅವು ಸರಿಯಾಗಿ ಫಸಲು ಬರದೆ ಜಿಲ್ಲೆಯೊಂದರಲ್ಲೇ ರೈತರಿಗೆ ಸುಮಾರು ₹5 ಸಾವಿರ ಕೋಟಿ ಹಾನಿಯಾಗಿದೆ. ಕಳಪೆ ತೊಗರಿ ವಿತರಿಸಿದ ಕಂಪನಿಗಳ ಮೇಲೆ ಕ್ರಮ ಆಗಬೇಕು ಎಂದರು.ಬೀಜೋತ್ಪಾದನೆಯ ಕಂಪನಿಗಳು ಬೀಜ ತಯಾರಿಕೆ ಮಾಡುವ ಕುರಿತು ಮಾಹಿತಿ ಕೊಡಬೇಕು, ಬೀಜ ನಿಗಮ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಅಲ್ಲಿಗೆ ತೆರಳಿ ಪ್ರಾಯೋಗಿಕವಾಗಿ ಬೆಳೆದ ಪ್ಲಾಂಟ್‌ಗಳಲ್ಲಿ ಗುಣಮಟ್ಟದ ಕುರಿತು ಪರೀಕ್ಷೆ ಮಾಡಬೇಕಿತ್ತು. ಅದ್ಯಾವುದೂ ಮಾಡದೆ ಕಂಪನಿಗಳು ವಿತರಿಸಿದ ಬೀಜಗಳನ್ನು ರೈತರಿಗೆ ನೀಡಿ ಮಹಾ ಮೋಸ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ 5.38 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬೆಳೆದಿದ್ದು, ಶೇ. 80ರಷ್ಟು ಬೆಳೆ ಹಾನಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಭೂಮಿಯಲ್ಲಿ ತೇವಾಂಶದ ಕೊರತೆ, ಮಂಜು ಬಿದ್ದಿದೆ, ದಟ್ಟವಾಗಿ ಬಿತ್ತನೆ ಮಾಡಲಾಗಿದೆ ಎಂದು ಇತ್ಯಾದಿ ಸುಳ್ಳು ಕಾರಣಗಳನ್ನು ಅಧಿಕಾರಿಗಳು ಹೇಳುವ ಮೂಲಕ ರೈತರ ಕಿವಿಗೆ ಹೂ ಇಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳು ತಕ್ಷಣ ರೈತರ ಹೊಲಗಳಿಗೆ ಹೋಗಿ ಮೊದಲು ಸರ್ವೇ ಮಾಡಬೇಕು ಎಂದು ಒತ್ತಾಯಿಸಿದರೂ ಕೃಷಿ ಇಲಾಖೆ, ಡಿಸಿ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.ಹಳ್ಳಿಹಳ್ಳಿಗಳ ರೈತರಿಂದ ದೂರು
ಜಿಲ್ಲಾದ್ಯಂತ ಕಳಪೆ ತೊಗರಿ ಬೀಜಗಳನ್ನು ನೀಡಿದ್ದರಿಂದ ಎಲ್ಲೆಡೆ ಬೆಳೆ ಹಾನಿಯಾಗಿದ್ದು, ಜಿಲ್ಲೆಯ ಪ್ರತಿ ಊರಿನಿಂದ ಒಬ್ಬರು ರೈತ ಪ್ರತಿನಿಧಿಗಳನ್ನು ಕರೆತಂದು ಲೋಕಾಯುಕ್ತರಿಗೆ ಮನವಿ ಕೊಡಲಾಗುತ್ತಿದೆ. ಅದರಲ್ಲಿ ರೈತರ ಹೆಸರು, ಊರು, ಸರ್ವೇ ನಂಬರ್, ಎಷ್ಟು ಎಕರೆ ಹಾನಿ ಎಂಬುದರ ಕುರಿತು ಮಾಹಿತಿ ಹಾಕಿ ಕೊಡಲಾಗುತ್ತಿದೆ.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರೈತರಿಗೆ ಆದ ಅನ್ಯಾಯದ ಕುರಿತು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ ಎಲ್ಲರಿಗೂ ಮನವಿ ಮಾಡಿದರೂ ರೈತರ ಗೋಳು ಕೇಳುವವರು ಇಲ್ಲವಾಗಿದೆ. ತೊಗರಿ ಬೀಜ ವಿಚಾರದಲ್ಲಿ ಮಂತ್ರಿಗಳಿಂದ ತಾಲೂಕು ಅಧಿಕಾರಿಗಳವರೆಗೆ ರೈತರ ಸುಲಿಗೆ ಮಾಡಲಾಗಿದೆ. ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಹೂ, ಕಾಯಿ ಬಿಡದೆ ಗಿಡ ಮಾತ್ರ ಬೆಳೆದಿದ್ದು, ರೈತರಿಗೆ ಅನ್ಯಾಯವಾಗಿದೆ. ಜಿಲ್ಲಾದ್ಯಂತ ತೊಗರಿ ಬೆಳೆ ಸರ್ವನಾಶವಾಗಿದೆ. ರೈತರು ಅವಲಂಬನೆಯಾದ ಬೆಳೆ ಹೋಗಿದೆ. ಇದರಲ್ಲಿ ಕೃಷಿ ಸಚಿವರು, ಅಧಿಕಾರಿಗಳು ರೈತರಿಗೆ ಮೋಸ ಮಾಡಿದ್ದಾರೆ. ಇದೆಲ್ಲದರ ಕುರಿತು ಸಮಗ್ರ ತನಿಖೆ ಮಾಡಬೇಕು, ಶಿಕ್ಷೆ ಕೊಡುವ ಕೆಲಸ ಆಗಬೇಕು, ರೈತರಿಗೆ ತಕ್ಷಣವೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ, ಮುಖಂಡರಾದ ಶಿವಾನಂದ ಅವಟಿ, ವಿಜಯ ಜೋಶಿ, ಶಿವರಾಜ ಕೆಂಗನಾಳ, ಮಹಿಳಾ ಮುಖಂಡರಾದ ರೇಣುಕಾ ಪರಸಪ್ಪಗೋಳ, ಸುವರ್ಣಾ ಬಿರಾದಾರ, ಗೌರಮ್ಮ ಹುನಗುಂದ, ಉಪಸ್ಥಿತರಿದ್ದರು.------------
ಬಾಕ್ಸ್.......ಕೃಷಿ ಸಚಿವರ ಬಂಧನಕ್ಕೆ ಒತ್ತಾಯ
ಕಳಪೆ ತೊಗರಿ ಬೀಜ ವಿತರಣೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಕೈವಾಡ ಇದ್ದು, ಅವರನ್ನು ತಕ್ಷಣ ಬಂಧಿಸಬೇಕು. ಜೊತೆಗೆ ಇಲಾಖೆಯ ಆಯುಕ್ತರು, ಜೆಡಿಗಳ ಮೇಲೂ ಕ್ರಮ ಆಗಬೇಕು. ರೈತರಿಗೆ ಆಗಿರುವ ಐದು ಸಾವಿರ ಕೋಟಿ ನಷ್ಟವನ್ನು ಪರಿಹಾರದ ರೂಪದಲ್ಲಿ ರಾಜ್ಯ ಸರ್ಕಾರ ಕೊಡಬೇಕು. ಮೊದಲ ಹಂತದಲ್ಲಿ ಲೋಕಾಯುಕ್ತರಿಗೆ ದೂರು ನೀಡಲಾಗುತ್ತಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಇದಕ್ಕೂ ಮಣಿಯದಿದ್ದರೆ ಎರಡನೇ ಹಂತದಲ್ಲಿ ರಾಜ್ಯಪಾಲರಿಗೆ ಮನವಿ ಕೊಡಲಿದ್ದೇವೆ. ಕೃಷಿ ಇಲಾಖೆಯಲ್ಲಿ ನೂರಾರು ಕೋಟಿ ಲಂಚದ ವ್ಯವಹಾರ ನಡೆದಿದ್ದು, ಇದರಲ್ಲಿ ಕೃಷಿ ಸಚಿವರು ಭಾಗಿಯಾಗಿದ್ದಾರೆ. ಬೀಜ ಮಾಫಿಯಾದ ವಿರುದ್ಧ ಸಿಬಿಐ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಈ ಸರ್ಕಾರ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದ್ದು, ಅದರ ವಿರುದ್ಧ ನಮ್ಮ ಹೋರಾಟ ಇದೆ ಎಂದರು.