ಶರಣು ಸೊಲಗಿ
ಹೆಸರೂರು ರಸ್ತೆ, ಹೆಸರೂರು ರಸ್ತೆ ಆಶ್ರಯ ಕಾಲನಿ, ಗದಗ ರಸ್ತೆ, ಎಸ್.ಎಸ್. ಪಾಟೀಲ ನಗರ, ರಾಮೇನಹಳ್ಳಿ ರಸ್ತೆ, ಗಟ್ಟಿರಡ್ಡಿಹಾಳ ರಸ್ತೆ ಹೀಗೆ ಅನೇಕ ಕಡೆ ಕಸವನ್ನು ತಂದು ಸುರಿಯಲಾಗುತ್ತಿದೆ. ಇಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎಂದು ಪುರಸಭೆ ಪಟ್ಟಣದ ಅನೇಕ ಕಡೆ ತಿಳಿವಳಿಕೆ ಫಲಕ ಹಾಕಿದ್ದರೂ ಸಾರ್ವಜನಿಕರು ಮಾತ್ರ ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಪಟ್ಟಣದಲ್ಲಿ ಒಟ್ಟು 23 ವಾರ್ಡಗಳಿದ್ದು, ಪ್ರತಿ ವಾರ್ಡಿನಿಂದ ಮನೆ ಮನೆಯ ಕಸ ವಿಲೇವಾರಿ ಮಾಡುವುದಕ್ಕಾಗಿ ಕೆಲವೆಡೆ 2 ದಿನಕ್ಕೊಮ್ಮೆ ಇನ್ನು ಕೆಲವೆಡೆ 2- 3 ದಿನಕ್ಕೊಮ್ಮೆ ಬಂದು ಕಸ ಹಸಿ ಕಸ, ಒಣ ಕಸ ಬೇರೆ ಬೇರೆ ಸಂಗ್ರಹಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಹಳೆ ತರಕಾರಿ ಮಾರುಕಟ್ಟೆ, ಹಳೆ ಎಪಿಎಂಸಿಯಲ್ಲಿರುವ ತರಕಾರಿ ಮಾರುಕಟ್ಟೆ, ಬಜಾರ, ಬಸ್ ನಿಲ್ದಾಣ, ಬೃಂದಾವನ ವೃತ್ತ, ಕೊಪ್ಪಳ ವೃತ್ತ ಹೀಗೆ ವಿವಿಧೆಡೆ ಸಂಗ್ರಹವಾಗುವ ಕಸವನ್ನು ಪುರಸಭೆ ಟ್ರ್ಯಾಕ್ಟರ್ ಮೂಲಕ ತುಂಬಿಸಿಕೊಂಡು ವಿಲೇವಾರಿ ಮಾಡಲಾಗುತ್ತದೆ.ಪಟ್ಟಣದ ಹೆಸರೂರು ರಸ್ತೆ, ರಾಮೇನಹಳ್ಳಿ ರಸ್ತೆ ಹಾಗೂ ಮುಖ್ಯಾಧಿಕಾರಿಯವರ ವಸತಿನಿಲಯದ ಸಮೀಪದಲ್ಲಿರುವ ಉದ್ಯಾನವನದ ಎದುರಿನಲ್ಲಿ ಸಾಕಷ್ಟು ಕಸ ತಂದು ಹಾಕಿದರೂ ಪುರಸಭೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗದೇ, ಈ ಕುರಿತು ಕಸ ಹಾಕುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪುರಸಭೆ ಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಹಾಕುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಕ್ರಮ ಕೈಗೊಳ್ಳಬೇಕು. ಕೆಲವು ಬಾರಿ ಒಂದೊಂದು ಪ್ರದೇಶಗಳಿಗೆ 7- 8 ದಿಗಳಾದರೂ ಕಸ ಸಂಗ್ರಹ ವಾಹನಗಳು ಬಂದಿರುವುದಿಲ್ಲ. ಈ ಕುರಿತು ಸಂಬಂಧಪಟ್ಟವರನ್ನು ಕೇಳಿದಾಗ ವಾಹನ ರಿಪೇರಿಯಂತಹ ಕಾರಣ ಹೇಳುತ್ತಾರೆ.