ಶಿರಸಿ ಸನಿಹದ ಹುತ್ಗಾರ ಗ್ರಾಪಂ ಮುಖ್ಯ ರಸ್ತೆಯಲ್ಲಿ ಕಸದ ರಾಶಿ

KannadaprabhaNewsNetwork |  
Published : Nov 07, 2024, 12:02 AM ISTUpdated : Nov 07, 2024, 12:03 AM IST
೫ಎಸ್.ಆರ್.ಎಸ್೨ಪೊಟೋ೧೨ (ರಸ್ತೆಯ ಪಕ್ಕದಲ್ಲಿ ಕಸ ಎಸೆದಿರುವುದು.)೫ಎಸ್.ಆರ್.ಎಸ್೨ಪೊಟೋ೧೨ (ರಾಜಕಾಲುವೆಗೆ ಸ್ನಾನ-ಶೌಚಗೃಹದ ನೀರು ಬಿಟ್ಟಿರುವುದು.)೫ಎಸ್.ಆರ್.ಎಸ್೨ಪೊಟೋ೧೨ (ಹುತ್ಗಾರ ಅರಣ್ಯ ಪ್ರದೇಶದಲ್ಲಿ ಕಸ ಎಸೆದಿರುವುದು.) | Kannada Prabha

ಸಾರಾಂಶ

ನಗರಕ್ಕೆ ಅತಿ ಸನಿಹದಲ್ಲಿರುವ ಹುತ್ಗಾರ ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಚೀಲದ ರಾಶಿ ಕಾಣುತ್ತಿದೆ. ನಗರದ ನಿವಾಸಿಗಳು ಮನೆ ಮನೆಗೆ ಕಸ ಸಂಗ್ರಹಣೆಗೆಂದು ಬರುವ ವಾಹನಗಳಿಗೆ ಕಸ ನೀಡದೇ ನಗರದ ಅಂಚಿನ ಅರಣ್ಯ ಪ್ರದೇಶ ಹಾಗೂ ಖಾಲಿ ಜಾಗದಲ್ಲಿ ಎಸೆದು ಹೋಗುತ್ತಿದ್ದಾರೆ.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ವಿದ್ಯಾವಂತರೇ ಅಧಿಕ ಸಂಖ್ಯೆಯಲ್ಲಿರುವ ನಗರದಂಚಿನ ಹುತ್ಗಾರ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳೇ ರಾರಾಜಿಸುತ್ತಿದೆ. ಶಿಕ್ಷಿತರಿರುವ ಪ್ರದೇಶವೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ನಗರಕ್ಕೆ ಅತಿ ಸನಿಹದಲ್ಲಿರುವ ಹುತ್ಗಾರ ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಚೀಲದ ರಾಶಿ ಕಾಣುತ್ತಿದೆ. ನಗರದ ನಿವಾಸಿಗಳು ಮನೆ ಮನೆಗೆ ಕಸ ಸಂಗ್ರಹಣೆಗೆಂದು ಬರುವ ವಾಹನಗಳಿಗೆ ಕಸ ನೀಡದೇ ನಗರದ ಅಂಚಿನ ಅರಣ್ಯ ಪ್ರದೇಶ ಹಾಗೂ ಖಾಲಿ ಜಾಗದಲ್ಲಿ ಎಸೆದು ಹೋಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಳೀಯಾಡಳಿತದ ಮೂಲಕ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆ ಕಸ ವಿಲೇವಾರಿಗೂ ಅನುದಾನ ಮಂಜೂರಿ ಮಾಡಿ, ಪ್ರತಿ ಗ್ರಾಪಂಗೆ ಘನತ್ಯಾಜ್ಯ ನಿರ್ವಹಣಾ ಘಟಕ ಮತ್ತು ಒಂದು ಕಸ ಸಂಗ್ರಹಣೆ ವಾಹನ ನೀಡಿದೆ. ಆದರೂ ಪ್ಲಾಸ್ಟಿಕ್ ಹಾಗೂ ಇನ್ನಿತರ ಘನತ್ಯಾಜ್ಯ ರಸ್ತೆಯ ಪಕ್ಕದಲ್ಲಿ ರಾಶಿಯಾಗಿದೆ. ಶೌಚದ ನೀರು ರಾಜಕಾಲುವೆಗೆ: ಹುತ್ಗಾರ ಗ್ರಾಪಂದಲ್ಲಿ ನಿರ್ಮಾಣವಾದ ಹೊಸ ಬಡಾವಣೆಯಲ್ಲಿನ ಮನೆಗಳ ಶೌಚಾಲಯದ ನೀರು, ಸ್ನಾನಗೃಹದ ಕೊಳಚೆ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿಬಿಟ್ಟಿದ್ದಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ. ಕೊಳಚೆ ನೀರನ್ನು ನೇರವಾಗಿ ಕಾಲುವೆಗಳಿಗೆ ಬಿಡುವುದು ಶಿಕ್ಷಾರ್ಹ ಅಪರಾಧವಾದರೂ ಅದ್ಯಾವುದನ್ನೂ ಲೆಕ್ಕಿಸದೇ ಕಾಲುವೆಗೆ ಬಿಡಲಾಗಿದೆ. ಇದನ್ನು ಗಮನಿಸದೇ ಲೇಔಟ್‌ಗೆ ಅನುಮತಿ ನೀಡಲಾಗಿದೆ. ಇದರ ಕುರಿತು ಗ್ರಾಪಂ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.ನಗರದ ವ್ಯಾಪ್ತಿಯ ಅಂಗಡಿ, ಬೀದಿಬದಿಯ ವ್ಯಾಪಾರಿಗಳು ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುತ್ತಿಲ್ಲ. ರಾತ್ರಿ ಸಮಯದಲ್ಲಿ ಯಾರೂ ಇಲ್ಲದನ್ನು ಗಮನಿಸಿ, ಬೈಕ್ ಮೇಲೆ ತಂದು ಹಾಕುತ್ತಿದ್ದರು. ಇದನ್ನು ತಡೆಗಟ್ಟಲು ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಆ ಸ್ಥಳವನ್ನು ಬಿಟ್ಟು ಬೇರೆ ಸ್ಥಳದಲ್ಲಿ ಕಸ ಎಸೆಯುತ್ತಿದ್ದಾರೆ. ಹುತ್ಗಾರ ಮತ್ತು ಇಟಗುಳಿ ಗ್ರಾಪಂ ಸೇರಿಕೊಂಡು ಮನೆ ಮನೆ ಕಸಗಳನ್ನು ಸಂಗ್ರಹಿಸಿ, ಇಟಗುಳಿ ಗ್ರಾಪಂ ಘನತ್ಯಾಜ್ಯ ಘಟಕದಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು. ಹುತ್ಗಾರ ಗ್ರಾಪಂ ಬಡಾವಣೆಯಲ್ಲಿರುವ ನಾಗರಿಕರು ಕೊಳಚೆ ವಸ್ತುಗಳನ್ನು ನೀಡುತ್ತಿರುವುದರಿಂದ ಕಸ ಬೇರ್ಪಡಿಸಲು ಇಟಗುಳಿ ಗ್ರಾಪಂ ನಿರಾಕರಣೆ ಮಾಡಿತ್ತು. ಈ ಕಾರಣದಿಂದ ಹುತ್ಗಾರ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಸ ಸಂಗ್ರಹಣೆ ಮಾಡುವುದು ದೊಡ್ಡ ತಲೆನೋವಾಗಿದೆ. ಈ ಕಾರಣದಿಂದ ಹುತ್ಗಾರನಲ್ಲಿ ಪ್ರತ್ಯೇಕ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಕಸ ಸಂಗ್ರಹಣೆ ಸಮಸ್ಯೆ ಬಗೆಹರಿಯಲಿದೆ.

ಕೆಂಗ್ರೆ ಹೊಳೆಗೆ ಸೇರುತ್ತಿರುವ ಕೊಳಚೆ ನೀರುಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಬಡಾವಣೆಯಲ್ಲಿನ ಮನೆಗಳ ಕೊಳಚೆ ನೀರು ರಾಜಕಾಲುವೆಯ ಮೂಲಕ ಕೆಂಗ್ರೆ ಹೊಳೆಗೆ ಸೇರುತ್ತಿದ್ದು, ಪುನಃ ಶಿರಸಿ ನಗರಕ್ಕೆ ಇದೇ ನೀರು ಬಳಕೆಯಾಗುತ್ತಿದೆ. ಶುದ್ಧೀಕರಣವಾಗಿ ನೀರು ಪೂರೈಕೆ ಮಾಡಿದರೂ ಕೊಳಚೆ ನೀರು ಜಲಮೂಲಗಳಿಗೆ ನೇರವಾಗಿ ಬಿಡಬಾರದು ಎಂಬ ಸರ್ಕಾರದ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ರಾಜಕಾಲುವೆಗೆ ಹರಿಬಿಟ್ಟಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹುತ್ಗಾರ ಗ್ರಾಪಂ ನಿವಾಸಿಗಳು ಆಗ್ರಹಿಸಿದ್ದಾರೆ.

ಎಚ್ಚರಿಕೆ ನೀಡಲಿ: ನಗರದಂಚಿನ ಗ್ರಾಮಗಳಿಗೆ ಕಸ ಎಸೆಯುವುದು ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಗ್ರಾಪಂ, ಪೊಲೀಸ್, ಸ್ಥಳೀಯರು ಜಂಟಿ ಕಾರ್ಯಾಚರಣೆ ನಡೆಸಿ, ಇಂತಹ ಬೇಜವಾಬ್ದಾರಿ ವ್ಯಕ್ತಿಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಬೇಕು. ಅರಣ್ಯ ಜಾಗದಲ್ಲಿ ಕಸ ಎಸೆಯುವವರ ಮೇಲೆ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿ, ಎಚ್ಚರಿಕೆ ನೀಡಬೇಕಿದೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ತಿಳಿಸಿದರು.

ಒತ್ತಡಕ್ಕೆ ಮಣಿಯಲ್ಲ: ಹುತ್ಗಾರ ಗ್ರಾಪಂ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ಕಸ ಎಸೆಯುವುದನ್ನು ತಡೆಗಟ್ಟಲು ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ. ಕ್ಯಾಮೆರಾ ಅಳವಡಿಸಿದ ಜಾಗದಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ, ಬೇರೆ ಜಾಗದಲ್ಲಿ ಎಸೆಯುತ್ತಿದ್ದಾರೆ. ಸಭೆಯಲ್ಲಿ ತೀರ್ಮಾನ ಕೈಗೊಂಡು ಕಸ ಎಸೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಹುತ್ಗಾರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ತಿಳಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ