ರಾಮನಗರ: ಪ್ರಥಮ ವರ್ಷದ ರಾಮಮಾಲಾ ಅಭಿಯಾನ ಯಶಸ್ವಿಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ರಾಮಮಾಲೆ ಧರಿಸಿದ್ದ ಯುವಕರು ರಾಮನವಮಿ ಪ್ರಯುಕ್ತ ರಾಮದೇವರ ಬೆಟ್ಟದ ಪಟ್ಟಾಭಿ ಸೀತಾರಾಮನಿಗೆ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆ ಮಾಡಿದರು.
ಅಂತಿಮ ದಿನವಾದ ಬುಧವಾರ ರಾಮನಗರದ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಾನಕ, ಮಜ್ಜಿಗೆ ವಿತರಿಸಿದರು. ಇದಾದ ಬಳಿಕ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಹೊರಟ ರಾಮ ಮಾಲಾಧಾರಿಗಳು ರಾಮದೇವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳಿದರು. ಈ ವೇಳೆ ರಾಮ ಭಜನೆ ನಡೆಸಲಾಯಿತು.
ಬೆಟ್ಟದ ದೇವಾಲಯದ ಆವರಣದಲ್ಲಿ ರಾಮ ತಾರಕ ಹೋಮ ಆಯೋಜಿಸಲಾಗಿತ್ತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಮ ಮಾಲಾಧಾರಿಗಳು ಮಾಲೆಯನ್ನು ವಿಸರ್ಜಿಸಿದರು.ಸುದ್ದಿಗಾರರೊಂದಿಗೆ ಭಜರಂಗದಳದ ಜಿಲ್ಲಾ ಗೋ ರಕ್ಷಕ್ ಪ್ರಮುಖ ಶ್ರೀನಿಧಿ ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಭಜರಂಗದಳದ ವತಿಯಿಂದ ರಾಮನಗರದಲ್ಲಿ ರಾಮಮಾಲೆಯ ಧಾರಣೆ ಅಭಿಯಾನ ಮಾಡಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರಳವಾಗಿ ಅಭಿಯಾನವನ್ನು ಆಯೋಜಿಸಲಾಗಿದ್ದು, ಮುಂದಿನ ವರ್ಷದಿಂದ ಅದ್ಧೂರಿಯಾಗಿ ಅಭಿಯಾನ ಏರ್ಪಡಿಸಲಾಗುತ್ತದೆ ಎಂದರು. ಭಜರಂಗದಳದ ಜಿಲ್ಲಾಧ್ಯಕ್ಷ ಕೋಟೆ ಕಿರಣ್, ಮಧುಸೂಧನ್ ಇತರರಿದ್ದರು.