ಬಸವರಾಜ ಸರೂರ
ರಾಣಿಬೆನ್ನೂರು: ಕಳೆದ ಎರಡ್ಮೂರು ವರ್ಷಗಳಿಂದ ಬೆಳ್ಳುಳ್ಳಿ ಬೆಳೆಯಿಂದ ಹಿಂದೆ ಸರಿದಿದ್ದ ರೈತರು ಪ್ರಸಕ್ತ ವರ್ಷ ಬೆಳ್ಳುಳ್ಳಿ ಬೆಳೆಯ ಕಡೆಗೆ ಆಸಕ್ತಿ ತೋರಿದ ಪರಿಣಾಮ ಬೆಳೆಯ ಕ್ಷೇತ್ರ ಹೆಚ್ಚಳವಾಗಿದೆ.ಹೌದು! ಕಳೆದ ವರ್ಷ ಉತ್ತಮ ಬೆಲೆ ಸೇರಿದಂತೆ ನಾನಾ ಕಾರಣದಿಂದ ಪ್ರಸಕ್ತ ವರ್ಷ ಬೆಳ್ಳುಳ್ಳಿಯ ಕ್ಷೇತ್ರ ಹೆಚ್ಚಾಗಲು ಕಾರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಬೆಳ್ಳುಳ್ಳಿ ಬೆಳೆಯ ಕ್ಷೇತ್ರ ಕುಸಿಯುತ್ತಿತ್ತು. ಆದರೆ ಪ್ರಸಕ್ತ ವರ್ಷ ಬಿತ್ತನೆ ಕ್ಷೇತ್ರ ಏರಿಕೆಯಾಗಿದೆ. ಬಿತ್ತನೆ ದುಪ್ಪಟ್ಟು: ತಾಲೂಕಿನಲ್ಲಿ ಕಳೆದ ವರ್ಷ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ಬೆಳ್ಳುಳ್ಳಿ ಬೆಳೆಯ ಕ್ಷೇತ್ರ ಈ ಬಾರಿ 1300ರಿಂದ 1400 ಹೆಕ್ಟೇರ್ ಕ್ಷೇತ್ರಕ್ಕೆ ಏರಿಕೆಯಾಗಿದೆ. ತಾಲೂಕಿನ ಹಲಗೇರಿ, ಇಟಗಿ, ಮಾಗೋಡ, ಯರೇಕುಪ್ಪಿ, ಸುಣಕಲ್ಲಬಿದರಿ, ಬೆನಕನಕೊಂಡ, ಮುಷ್ಟೂರ, ಮಣಕೂರ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಬೆಳ್ಳುಳ್ಳಿ ಬೆಳೆ ಬೆಳೆಯಲಾಗುತ್ತಿದೆ. ಕ್ಷೇತ್ರ ಹೆಚ್ಚಾಗಲು ಕಾರಣ?: ಪ್ರಸಕ್ತ ವರ್ಷ ಕ್ಷೇತ್ರ ಹೆಚ್ಚಾಗಲು ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಸಮರ್ಪಕ ಮಳೆ. ಇದು ಮಳೆಯಾಶ್ರಿತ ಬೆಳೆಯಾದ ಹಿನ್ನೆಲೆಯಲ್ಲಿ ಮಳೆಯನ್ನು ನಂಬಿ ಬಿತ್ತನೆ ಮಾಡುತ್ತಾರೆ. ಮಳೆ ಕೈಕೊಟ್ಟರೆ ರೈತರು ಕಷ್ಟ ಎದುರಿಸಬೇಕಾಗುತ್ತದೆ. ಕಳೆದ ವರ್ಷ ಬೆಳ್ಳುಳ್ಳಿ ಬೆಳೆಗೆ ಹೆಚ್ಚು ಬೆಲೆ ದೊರೆತ ಪರಿಣಾಮ ಕ್ಷೇತ್ರ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.ಇದಕ್ಕೆ ವ್ಯತಿರಿಕ್ತವಾಗಿ ಈರುಳ್ಳಿ ಬೆಳೆಗೆ ಹೆಚ್ಚು ಮಳೆಯಾದರೆ ಬೆಳೆ ಬರುವುದಿಲ್ಲ. ಅದರ ಬದಲಾಗಿ ಬೆಳ್ಳುಳ್ಳಿ ಹೆಚ್ಚು ಮಳೆಯಾದರೂ ತಡೆದುಕೊಳ್ಳುವ ಶಕ್ತಿ ಹೊಂದಿದೆ ಎನ್ನುವುದು ರೈತರ ಅನಿಸಿಕೆಯಾಗಿದೆ. ಕಡಿಮೆಯಾದ ಈರುಳ್ಳಿ ಕ್ಷೇತ್ರ: ಕಳೆದ ನಾಲ್ಕೈದು ವರ್ಷಗಳ ಹಿಂದೆ ತಾಲೂಕಿನಲ್ಲಿ ಈರುಳ್ಳಿ ಬೆಳೆಯನ್ನು ಹೆಚ್ಚು ಬಿತ್ತನೆ ಮಾಡುತ್ತಿದ್ದರು. ಪ್ರತಿವರ್ಷ 2500ರಿಂದ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಿದ್ದ ಈರುಳ್ಳಿ ಕ್ಷೇತ್ರ ಪ್ರಸಕ್ತ ವರ್ಷ ಕಡಿಮೆಯಾಗಿದ್ದು, 800ರಿಂದ 1 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಕೂಲಿ ಕಾರ್ಮಿಕರು ಹಾಗೂ ಹೆಚ್ಚು ಮಳೆಯಾಗುತ್ತಿರುವ ಕಾರಣ ಬೆಳೆ ಹಾಳಾಗಿ ದರ ದೊರೆಯುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಈರುಳ್ಳಿ ಕ್ಷೇತ್ರದಿಂದ ವಿಮುಖರಾಗಿದ್ದಾರೆ.ಬೆಳ್ಳುಳ್ಳಿಗೆ ದೊರೆತ ಬೆಲೆ: ತಾಲೂಕಿನಲ್ಲಿ ಹಿಂದೆ ಈರುಳ್ಳಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಆದರೆ ಹೆಚ್ಚು ಮಳೆಯಾದರೆ ಈರುಳ್ಳಿ ಬೆಳೆಗೆ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಬೆಳೆ ಬೇಗ ಹಾಳಾಗುತ್ತದೆ. ಹೀಗಾಗಿ ಈರುಳ್ಳಿ ಕ್ಷೇತ್ರ ಕಡಿಮೆ ಮಾಡಿ ಬೆಳ್ಳುಳ್ಳಿ ಬೆಳೆಯ ಕಡೆಗೆ ಆಸಕ್ತಿ ತೋರಿದ್ದಾರೆ. ಇದಕ್ಕೆ ಕಳೆದ ವರ್ಷ ಬೆಳ್ಳುಳ್ಳಿಗೆ ದೊರೆತ ಬೆಲೆಯೂ ಕಾರಣವಾಗಿರಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜಾನಾಯ್ಕ ತಿಳಿಸಿದರು.
ಬೆಲೆ ಹೆಚ್ಚಳ ನಿರೀಕ್ಷೆ: ಕಳೆದ ವರ್ಷ ಪ್ರತಿ ಕೆಜಿಗೆ ₹400ರ ವರೆಗೆ ದರ ಲಭಿಸಿತ್ತು. ಇದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆದಿದ್ದು, ದರ ₹120ಕ್ಕೆ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಿದೆ ಎಂದು ಮಣಕೂರ ಗ್ರಾಮದ ಬೆಳ್ಳುಳ್ಳಿ ಬೆಳೆಗಾರ ಯಮನಪ್ಪ ರಾಜನಹಳ್ಳಿ ತಿಳಿಸಿದರು.