ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಳವಳ್ಳಿ-ಮೈಸೂರು ರಸ್ತೆಯಲ್ಲಿ ಶೀಘ್ರ ಗಾರ್ಮೆಂಟ್ಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಜೊತೆಗೆ ತಾಲೂಕಿನಲ್ಲಿ ಕೈಗಾರಿಕೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಮಾಗನೂರು ಸಮೀಪ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ತಾಲೂಕಿನ ಪಂಡಿತಹಳ್ಳಿ ಭಾಗದಲ್ಲಿ ಕಾರ್ಖಾನೆ ಆರಂಭಿಸುವ ಸಂಬಂಧ ಅಧಿಕಾರಿಗಳ ಜೊತೆಗೆ ಅಂತಿಮ ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು.
ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಮೂಲಕ ನಿರುದ್ಯೋಗದ ಸಮಸ್ಯೆ ಬಗೆಹರಿಸಲಾಗುವುದು. ಸಾರ್ವಜನಿಕರ ಮಹತ್ವವನ್ನು ಅರಿತು ಜನರ ಭವಿಷ್ಯತ್‌ನ ಉದ್ದೇಶವನ್ನಿಟ್ಟುಕೊಂಡು ಕ್ಷೇತ್ರಕ್ಕೆ ವಿವಿಧ ಯೋಜನೆಗಳಿಗೆ ಅನುದಾನವನ್ನು ನನ್ನ ಒತ್ತಾಯದ ಮೇರೆಗೆ ಸರ್ಕಾರದಿಂದ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.ಶೀಘ್ರವೇ ಇತಿಹಾಸ ಪ್ರಸಿದ್ಧ ಗಗನಚುಕ್ಕಿ ಜಲಪಾತೋತ್ಸವ ನಡೆಸಲಾಗುವುದು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜಲಪಾತೋತ್ಸವ ಕಣ್ತುಂಬಿಕೊಳ್ಳುವ ದಿನಾಂಕವನ್ನು ಸದ್ಯದಲ್ಲಿಯೇ ನಿಗಧಿಪಡಿಸಲಾಗುವುದು ಎಂದರು.
ತಾಲೂಕು ಕೇಂದ್ರದಲ್ಲಿ ಹನಿ ನೀರಾವರಿ, ಇತರೆ ಯೋಜನೆಗಳು, ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಚಾಲನೆ ಹಾಗೂ ಕಟ್ಟಡ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮುಖ್ಯಮಂತ್ರಿಗಳು ಸೇರಿದಂತೆ ಸಚಿವರುಗಳ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಲಿದೆ ಎಂದರು.ನಂಜುಂಡಪ್ಪ ವರದಿ ಪ್ರಕಾರ ಮಳವಳ್ಳಿ ಹಿಂದುಳಿದ ತಾಲೂಕು ಆಗಿದ್ದರೂ ಕೂಡ ಅಭಿವೃದ್ಧಿ ಸೂನ್ಯ ಎನ್ನುವುದನ್ನು ತೆಗೆದುಹಾಕಿ ಅಭಿವೃದ್ಧಿ ಜವಾಬ್ದಾರಿಯಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.
ಹಲವು ಉದ್ದಿಮೆಗಳನ್ನು ಸಂಪರ್ಕವಾಗಿ ಮಾಡಿ ತಾಲೂಕಿನಲ್ಲಿ ಗ್ರಾಮೀಣ ಶಿಕ್ಷಣದಲ್ಲಿ ಕೊರತೆ ಇರುವ ಮೂಲ ಸೌಲಭ್ಯವನ್ನು ಕಲ್ಪಿಸಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಫೈಪೋಟಿ ಪಡೆಯುವ ರೀತಿಯಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.ಗ್ರಾಮೀಣ ಭಾಗದ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಪಾಲಿಟೇಕ್ನಿಕ್ ಕಾಲೇಜನ್ನು ಕ್ಷೇತ್ರದಲ್ಲಿ ಆರಂಭಿಸಲಾಯಿತು. ಐಟಿಐ, ಡಿಪ್ಲೊಮಾ ಓದಿದ ಎಲ್ಲಾರಿಗೂ ಖಾಸಗಿ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸುವ ಅವಕಾಶವಿದೆ. ಪಾಲಿಟೆಕ್ನಿಕ್ ಕಾಲೇಜಿನಿಂದ ಹೊರಹೋದ ಮೊದಲ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳಿಗೆ ಕಂಪನಿಯವರು ಉದ್ಯೋಗ ಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಜೂನಿಯರ್ ಕಾಲೇಜು ಆವರಣದಲ್ಲಿ 7.10ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾಗನೂರಿನಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟಿಸಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಜು, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ವಿಶ್ವ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.