ಕನ್ನಡಪ್ರಭ ವಾರ್ತೆ ಪಾಂಡವಪುರ
ನಶಿಸುತ್ತಿರುವ ಜನಪದ ಕಲೆಯನ್ನು ಪುನರ್ಜೀವನಗೊಳಿಸಲು ಮಕ್ಕಳಿಗೆ ಕಲೆಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಗೌಡ ಹೇಳಿದರು.ಪಟ್ಟಣದ ಪಿಇಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಲರವ ಚಿಣ್ಣರ ಮೇಳ ಸಮಾರೋಪ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆ ಮೂಲಕ ನಾಟಕಗಳ ಮೂಲಕ ಕಲಾ ಪ್ರದರ್ಶನ ನೀಡುತ್ತಿದ್ದಾರೆ. ಅವರ ಅಭಿನಯ ಅದ್ಭುತವಾಗಿದೆ ಎಂದರು.
ದೊಡ್ಡ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಹಾಗೂ ಮುಖ್ಯ ಶಿಕ್ಷಕ ಪ.ಮ.ನಂಜುಂಡಸ್ವಾಮಿಯವರ ಪರಿಶ್ರಮದ ಫಲವಾಗಿ ರಾಜ್ಯಾದ್ಯಂತ ಕೃಷ್ಣಾರ್ಜುನ ಕಾಳಗ ನಾಟಕ ಈಗಾಗಲೇ 21 ಪ್ರದರ್ಶನ ಕಂಡು ಜನರ ಮೆಚ್ಚುಗೆ ಗಳಿಸಿದೆ ಎಂದರು.ಪಾಂಡವಪುರ ತಹಸೀಲ್ದಾರ್ ಸಂತೋಷ್ ಅವರು ಮೂಲತಃ ರಂಗಭೂಮಿ ಕಲಾವಿದರಾಗಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಸಾಂಸ್ಕೃತಿಕ ಸೇವೆಗಾಗಿ ತಾಲೂಕಿನ ಉನ್ನತ ಅಧಿಕಾರಿಯಾಗಿ ಎಷ್ಟೇ ಒತ್ತಡವಿದ್ದರೂ ಕಲಾಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಕ್ಕಳಲ್ಲಿ ರಂಗಕಲೆ, ಸಾಂಸ್ಕೃತಿಕ ಕಲೆಯನ್ನು ಬೆಳೆಸುವ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ತಿಂಗಳ ಕಾಲ ಮಕ್ಕಳಿಗೆ ಉಚಿತ ಊಟ ನೀಡಿ ಶ್ರೇಷ್ಠ ರಂಗಭೂಮಿ ನಿರ್ದೇಶಕರನ್ನ ಕರೆಸಿ ಆ ಮೂಲಕ ನಾಟಕಗಳನ್ನು ಕಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ಇಂತಹ ಅಧಿಕಾರಿಗಳು ಮನಸು ಮಾಡಿದರೆ ಸಾಂಸ್ಕೃತಿಕವಾಗಿ ಕಲೆಯನ್ನು ಬಹು ಎತ್ತರಕ್ಕೆ ಬೆಳೆಸಬಹುದು ಎಂದರು.ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಮೂಡಲಪಾಯ ಶೈಲಿಯ ಯಕ್ಷಗಾನವು ಮೈಸೂರು - ಮಂಡ್ಯದಲ್ಲಿ ಮರೆಯಾಗುತ್ತಿದೆ. ಅದನ್ನು ಪುನರ್ಜೀವನಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಈ ಪ್ರಕಾರದ ಮಕ್ಕಳ ಪ್ರದರ್ಶನಗಳು ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರದರ್ಶನ ಗೊಳ್ಳುತ್ತಿರುವುದು ಹೆಮ್ಮೆ ಆಗುತ್ತವೆ ಎಂದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ನಾಟಕ ವೀಕ್ಷಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಕಾರ್ಯಕ್ರಮದಲ್ಲಿ ಶಿಬಿರದ ಪೂರ್ಣ ನೇತೃತ್ವ ಹಾಗೂ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆಯ ಪೂರ್ಣ ಜವಾಬ್ದಾರಿ ನಿರ್ವಹಿಸಿ ತಹಸೀಲ್ದಾರ್ ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ನಂದೀಶ್, ರಂಗಭೂಮಿ ನಿರ್ದೇಶಕ ಪ್ರಮೋದ್ ಶಿಗ್ಗಾಂವ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಬೀರಶೆಟ್ಟಹಳ್ಳಿ, ಶಿಬಿರದ ಸಂಘಟಕರಾದ ಪ.ಮ.ನಂಜುಂಡಸ್ವಾಮಿ ಕೆ.ಆರ್.ಪಕ್ಷದ ಮುಖಂಡ ಯೋಗೇಶ್ ಹಿರೇಮರಳಿ, ಚೇತನ್ ಹೊಸೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.