ಮೂಲ್ಕಿ : ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ವ್ಯತ್ಯಯದ ಬಿಸಿ ದಕ್ಷಿಣ ಕನ್ನಡ ಜಿಲ್ಲೆಗೂ ತಟ್ಟಿದೆ. ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಾದ ಕಟೀಲು ಕ್ಷೇತ್ರದಲ್ಲಿ ಅನ್ನ ಪ್ರಸಾದ, ಪೂಜೆಯ ಪ್ರಸಾದ ತಯಾರಿಸಲು ಗ್ಯಾಸ್ ಸಿಲಿಂಡರ್ ಅನ್ನು ಅವಲಂಬಿಸಿದ್ದು ಇದೀಗ ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದ್ದರಿಂದ ಧಾರ್ಮಿಕ ಕ್ಷೇತ್ರಗಳು ಸಂಕಷ್ಟಕ್ಕೊಳಗಾಗಿದ್ದು ಅಡುಗೆಗೆ ಕಟ್ಟಿಗೆಯ ಮೊರೆ ಹೋಗಲಾಗಿದೆ.ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ರಾಜ್ಯದಲ್ಲಿ ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ದೇವಳಕ್ಕೆ ಬರುವ ಭಕ್ತರಿಗೆ ಪ್ರತಿದಿನ ಬೆಳಗ್ಗೆ ಗಂಜಿ ಊಟ, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದ ನೀಡಲಾಗುತ್ತಿದೆ. ದೇವಳದ ಆಡಳಿತಕ್ಕೊಳಪಟ್ಟ ಕಿಂಡರ್ ಗಾರ್ಡನ್ ನಿಂದ ಹಿಡಿದು, ಪ್ರಾಥಮಿಕ, ಫ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕ್ಕೋತ್ತರ ಶಿಕ್ಷಣ ಸಂಸ್ಥೆಗಳಿದ್ದು ಸುಮಾರು 2500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ದೇವಳದಲ್ಲಿ ಅನ್ನ ಪ್ರಸಾದ ಸ್ವೀಕರಿಸುತ್ತಾರೆ. ಪ್ರತಿದಿನ ಸುಮಾರು 10000 ಮಂದಿ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದು ಅಡುಗೆ ತಯಾರಿ, ಪ್ರಸಾದ ತಯಾರಿ ಸೇರಿದಂತೆ ಪ್ರತಿಯೊಂದಕ್ಕೂ ಗ್ಯಾಸ್ ಸಿಲಿಂಡರ್ ಅನ್ನು ಅವಲಂಬಿಸಿದೆ.
ಈ ಬಗ್ಗೆ ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಪ್ರತಿಕ್ರಿಯಿಸಿದ್ದು, ದೇವಳದಲ್ಲಿ ಅನ್ನ ಪ್ರಸಾದ, ಪ್ರಸಾದ ತಯಾರಿಯಲ್ಲಿ ಯಾವುದೇ ತೊಂದರೆಯಾಗದಂತೆ ಗ್ಯಾಸ್ ಸಮಸ್ಯೆ ಬಗೆಹರಿಯುವವರೆಗೆ ಕಟ್ಟಿಗೆ ಮೂಲಕ ಅಡುಗೆ ಹಾಗೂ ಪ್ರಸಾದ ತಯಾರಿಸಲು ನಿರ್ಧರಿಸಲಾಗಿದೆ. ಕಟ್ಟಿಗೆ ಮೂಲಕ ಅಡುಗೆ ತಯಾರಿಸಲು ಹೆಚ್ಚು ಜನರ ಅಗತ್ಯವಿದ್ದು ಜೊತೆಗೆ ಖರ್ಚು ಹೆಚ್ಚು ತಗಲಲಿದೆ. ಆದರೂ ದೇವಳದಲ್ಲಿ ಭಕ್ತರಿಗೆ ಅನ್ನ ಪ್ರಸಾದ, ಪ್ರಸಾದ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು. ಯುದ್ದ ನಿಂತು ಶೀಘ್ರದಲ್ಲಿ ಸಮಸ್ಯೆ ಬಗೆಹರಿಯುವಂತೆ ದೇವಿಯ ಮೊರೆ ಹೋಗಲಾಗುವುದೆಂದು ಅವರು ತಿಳಿಸಿದ್ದಾರೆ.