ಕನ್ನಡಪ್ರಭ ವಾರ್ತೆ ನಾಗಮಂಗಲ
ಅಡುಗೆ ಮಾಡುವಾಗ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಮೇಲ್ಛಾವಣಿ, ಚಿನ್ನಾಭರಣ, ನಗದು ಸೇರಿದಂತೆ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ದೊಡ್ಡಟಜಕ ಸಮೀಪದ ಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.ಗ್ರಾಮದ ಚಿಕ್ಕೇಗೌಡರ ಅಜ್ಜಿ ಶಾಂತಮ್ಮ ಬುಧವಾರ ಬೆಳಗ್ಗೆ ಎಂದಿನಂತೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪೈಪ್‌ನಿಂದ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ.
ಸ್ಫೋಟದ ರಭಸಕ್ಕೆ ಮನೆ ಮೇಲ್ಛಾವಣಿಯ ಮಂಗಳೂರು ಹೆಂಚುಗಳು, ಮುಂಭಾದ ಸಿಮೆಂಟ್ ಶೀಟ್‌ಗಳು ಸಿಡಿದು ಛೀದ್ರವಾಗಿವೆ. ಮನೆ ಕಬ್ಬಿಣದ ಬೀರುವಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಮನೆಕಟ್ಟುವ ಸಲುವಾಗಿ ಕೊಬ್ಬರಿ ಮಾರಾಟ ಮಾಡಿ ಇಟ್ಟಿದ್ದ 3 ಲಕ್ಷ ರು. ನಗದು, ಮನೆ ಮತ್ತು ಜಮೀನಿಗೆ ಸಂಬಂಧಿಸಿದ ಮೂಲ ದಾಖಲಾತಿಗಳು, ದಿನಸಿ, ದವಸ ಧಾನ್ಯ, ಬಟ್ಟೆ, ಟಿವಿ ಸೇರಿದಂತೆ ಗೃಹೋಪಯೋಗಿ ಮತ್ತು ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗಿದೆ.ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚೀರಾಡುತ್ತಿದ್ದ ಶಾಂತಮ್ಮ ಅವರನ್ನು ಸ್ಥಳೀಯರು ಮನೆ ಹಿಂಬದಿಯಿಂದ ಒಳಭಾಗದ ಮೇಲ್ಛಾವಣಿಗೆ ಏಣೆ ಹಾಕಿ ರಕ್ಷಣೆ ಮಾಡಿದ್ದಾರೆ. ಶಾಂತಮ್ಮ ಅವರ ಕೈಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರಾದರೂ ಮನೆ ಮೇಲ್ಛಾವಣಿ, ಚಿನ್ನಾಭರಣ, ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದಾಗಿ ಚಿಕ್ಕೇಗೌಡರ ಕುಟುಂಬಕ್ಕೆ ಇರಲು ನೆಲೆ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.ಘಟನಾ ಸ್ಥಳಕ್ಕೆ ತಹಸೀಲ್ದಾರ್ ಜಿ.ಆದರ್ಶ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಬೆಳ್ಳೂರು ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಚಿಕ್ಕೇಗೌಡ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.