ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ರಂಗ ಬಂಡಿ ಮಳವಳ್ಳಿ ಆಯೋಜಿಸಿದ್ದ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ 7 ದಿನಗಳ ನಾಟಕೋತ್ಸವದಲ್ಲಿ ರಂಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಾಡಿನ ಉನ್ನತ ಸಂಸ್ಕೃತಿ, ಕಲೆ, ಪರಂಪರೆ ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರ ಮೇಲಿದೆ. ಯುವಸಮೂಹ ರಂಗಭೂಮಿಯ ಉನ್ನತ ಪರಂಪರೆ, ಇತಿಹಾಸ ಹಾಗೂ ಜನಪದ ಕಲೆಗಳ ಬಗ್ಗೆ ಅರಿವು ಪಡೆದು ರಂಗಭೂಮಿ ಬೆಳವಣಿಗೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ನಟ ಮಂಡ್ಯ ರಮೇಶ್ ಮಾತನಾಡಿ, ಈ ನಾಡಿನಲ್ಲಿ ರಂಗಭೂಮಿ ಕಲೆಗೆ ತನ್ನದೇ ಆದ ಇತಿಹಾಸವಿದೆ. ಇದರಲ್ಲಿನ ನೈಜಕಲೆ ಜನರ ಬದುಕಿನ ನೈಜಚಿತ್ರಣವನ್ನು ಅನಾವರಣಗೊಳಿಸುತ್ತದೆ. ರಂಗಭೂಮಿ ಬೆಳೆದರೆ ಸಮಾಜಮುಖಿ ಚಿಂತನೆಯೂ ಜನರಲ್ಲಿ ಮೂಡಿ ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ. ರಂಗಭೂಮಿಯಿಂದಾಗಿ ನಾಡಿನ ಉನ್ನತ ಸಂಸ್ಕೃತಿ, ಕಲೆ, ಪರಂಪರೆ ಉಳಿಸಿ ಬೆಳೆಸುವುರೊಂದಿಗೆ ಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು.
ಅದೇ ದಾರಿಯಲ್ಲಿ ನಡೆದು ಬಂದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಕುಟುಂಬ ರಂಗಭೂಮಿಯ ಉಳಿವಿಗಾಗಿ ಮತ್ತು ಸಿನಿಮಾ ರಂಗದ ಬೆಳವಣಿಗೆಗಾಗಿ ದುಡಿಯುತ್ತಿದೆ. ಇಂಥ ತಾಯಿ ಹೃದಯವುಳ್ಳ ನಟಿಗೆ ರಂಗ ಪ್ರಶಸ್ತಿ ದೊರೆತಿರುವುದು ಬಹಳ ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ಕೆಂಪೇಗೌಡರು ಅನೇಕ ಮಹನೀಯರು ಯಾವುದೇ ಜಾತಿಗೆ ಸೀಮಿತರಾಗದೇ ಸಮಾಜದ ಏಳಿಗೆ ಶ್ರಮಿಸಿದ್ದರು ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ.ಎಂ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನಾಟಕೋತ್ಸವದ ಬಗ್ಗೆ ವಿಶ್ವಮಾನವ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಮಂಡ್ಯ ರಮೇಶ್ ನಿರ್ದೇಶನದ ಜಾತಿ ವ್ಯವಸ್ಥೆ ವಿರುದ್ಧದ ಸ್ಥಾವರವು ಜಂಗಮ ನಾಟಕ ಪ್ರದರ್ಶನ ನೆರೆದಿದ್ದ ಸಾವಿರಾರು ರಂಗಪ್ರಿಯರ ಮನ ಗೆದ್ದಿತ್ತು.