ಮಂಡ್ಯದಲ್ಲಿ ಕೋಮು ಹಿಂಸೆ ನಿಗ್ರಹ ಪಡೆ ಆರಂಭಿಸಿ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ

KannadaprabhaNewsNetwork |  
Published : Sep 11, 2025, 12:03 AM IST
10ಕೆಎಂಎನ್ ಡಿ12 | Kannada Prabha

ಸಾರಾಂಶ

ಮದ್ದೂರು ಕಲ್ಲು ತೂರಾಟ ಪ್ರಕರಣ ನಡೆದಿರುವುದು ಖಂಡನಾರ್ಹ. ತಪ್ಪಿತಸ್ಥರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆ ನಂತರ ಕರ್ಫ್ಯೂ ಇದ್ದರೂ ಕಾನೂನು ಮೀರಿ ಪ್ರತಿಭಟನೆ ನಡೆಸಿದವರು ಹಾಗೂ ರಾಮ್ ರಹೀಂ ನಗರದ ಮಸೀದಿಗೆ ನುಗ್ಗುತ್ತೇವೆ ಎಂದವರನ್ನು ಬಂಧಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಪ್ರಯೋಗಗಳು ಆಗಿಂದಾಗ್ಗೆ ನಡೆಯುತ್ತಿವೆ. ಇವುಗಳನ್ನು ನಿಯಂತ್ರಿಸಲು ಮಂಗಳೂರು ಮಾದರಿ ಕೋಮು ಹಿಂಸೆ ನಿಗ್ರಹ ಪಡೆ ಆರಂಭಿಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕೋಮು ಪ್ರಯೋಗಗಳು ನಡೆಯುತ್ತಿವೆ. ಬಿಜೆಪಿ, ಸಂಘ ಪರಿವಾರ ಹಾಗೂ ಹಿಂದೂ ಸಂಘಟನೆಗಳ ಒಟ್ಟುಗೂಡಿಸಿ ಕೋಮು ವಿಷಬೀಜ ಬಿತ್ತಿ ಜಿಲ್ಲೆಯಲ್ಲಿ ನೆಲೆ ನಿಲ್ಲುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಸರ್ಕಾರ ಈಗಿನಿಂದಲೇ ಕಠಿಣ ಕ್ರಮ ಕೈಗೊಂಡು ಪೂರ್ವವಿರಾಮ ಹಾಕಬೇಕಿದೆ ಎಂದರು.

ಮದ್ದೂರು ಕಲ್ಲು ತೂರಾಟ ಪ್ರಕರಣ ನಡೆದಿರುವುದು ಖಂಡನಾರ್ಹ. ತಪ್ಪಿತಸ್ಥರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆ ನಂತರ ಕರ್ಫ್ಯೂ ಇದ್ದರೂ ಕಾನೂನು ಮೀರಿ ಪ್ರತಿಭಟನೆ ನಡೆಸಿದವರು ಹಾಗೂ ರಾಮ್ ರಹೀಂ ನಗರದ ಮಸೀದಿಗೆ ನುಗ್ಗುತ್ತೇವೆ ಎಂದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಬಾರಿ ನಾಗಮಂಗಲದಲ್ಲಿ ಕ್ರಮಕೈಗೊಂಡ ರೀತಿ ಎಚ್ಚರ ವಹಿಸಿದ್ದರೆ, ಮದ್ದೂರಲ್ಲಿ ಗಲಭೆ ನಡೆಯುತ್ತಿರಲಿಲ್ಲ. ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ 21 ಮಂದಿಯನ್ನು ಬಂಧಿಸಿರುವುದು ಶ್ಲಾಘನೀಯ. ಬಂಧಿತರ ಸಂಖ್ಯೆ 26ಕ್ಕೇರಿದೆ. ಜಿಲ್ಲಾ ಉಸ್ತುವಾರಿ ಮಂತ್ರಿ, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆಯ ಹೊಣೆ ಹೊರಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸುವ ವಿಕೃತ ಮನಸ್ಥಿತಿ ಹೊಂದಿದೆ. ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ. ಹಳ್ಳಿ, ಮೈಸೂರಿನ ಉದಯಗಿರಿ ಗಲಭೆ ಪ್ರಕರಣಗಳಲ್ಲಿ ಬಂಧಿತರ ಮೇಲಿನ ಪ್ರಕರಣಗಳ ಖುಲಾಸೆ ಮಾಡಿರುವುದು ಸರಿಯಲ್ಲ. ಒಂದು ಸಮುದಾಯದ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿರುವುದು ರಾಜ್ಯದಲ್ಲಿ ಕುಕೃತ್ಯಗಳಿಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಖಂಡಿಸಿದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಮದ್ದೂರು ತಾಲೂಕು ಅಧ್ಯಕ್ಷ ಶಂಕರ್, ಮಳವಳ್ಳಿ ತಾಲೂಕು ಅಧ್ಯಕ್ಷ ವಿ.ನಂಜುಂಡಸ್ವಾಮಿ, ಬಸವರಾಜು, ದೇವರಾಜು ಇತರರಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!