ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಮಾಜದಲ್ಲಿ ಮೇಲು-ಕೀಳು ಬಿಟ್ಟು ಒಂದೇ ಜಾತಿ, ಒಂದೇ ಮತ, ಒಂದೇ ದೈವ ಎಂಬ ಸಂದೇಶ ಸಾರಿದ ಹಿಂದುಳಿದ ವರ್ಗದ ಮಹಾನ್ ನಾಯಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಂತ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ತಾಲೂಕು ಆಡಳಿತ ಹಾಗೂ ತಾಲೂಕು ಆರ್ಯ ಈಡಿಗ ಸಮಾಜದಿಂದ ಪಟ್ಟಣದ ತಾಲೂಕು ಆಡಳಿತ ಸೌಧ ಆವರಣದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಶೋಷಿತರು ಮತ್ತು ಹಿಂದುಳಿದವರ ಶ್ರೇಯೋಭಿವೃದ್ಧಿಗೆ ನಾರಾಯಣ ಗುರುಗಳ ಹೋರಾಟ ಅವಿರಸ್ಮರಣೀಯವಾದದ್ದು. ಶಿಕ್ಷಣದೊಂದಿಗೆ ಸಾಮಾಜಿಕ ಕ್ರಾಂತಿಯನ್ನು ಮಾಡುವ ಮೂಲಕ ಶೋಷಿತ ಮತ್ತು ಹಿಂದುಳಿದ ಸಮಾಜಕ್ಕೆ ಸಮಾನತೆ ಒದಗಿಸಿಕೊಟ್ಟವರು. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಪರಿವರ್ತನೆಯ ಹರಿಕಾರರಾಗಿ ಅವರು ಸಮಾಜದ ಒಳಿತಿಗಾಗಿ ದುಡಿದಿದ್ದಾರೆ ಎಂದು ತಿಳಿಸಿದರು.
ಕೇರಳದ ಬಸವಣ್ಣ ಎಂದೇ ಪ್ರಖ್ಯಾತಿ ಪಡೆದ ನಾರಾಯಣ ಗುರುಗಳು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ತಮ್ಮ ಕಾಲದಲ್ಲಿ ಕೆಳಜಾತಿಯವರ ಮೇಲೆ ಆಗುತ್ತಿದ್ದ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ವಿಧಿಸಿದ್ದ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿ, ಮಾನವ ಕುಲ ಒಂದೇ ಎಂಬ ಸಿದ್ಧಾಂತವನ್ನು ಸಮಾಜದಲ್ಲಿ ಸಾರಿದ್ದರು, ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಿದರು. ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿ, ಜಾತಿಗಳ ನಡುವೆ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಸಮಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು ಎಂದು ಹೇಳಿದರು.ಸಮುದಾಯಗಳಿಗೆ ನಿವೇಶನ ನೀಡಲು ಕ್ರಮ:ತಾಲೂಕಿನಲ್ಲಿರುವ ವಿವಿಧ ಸಮಾಜಗಳ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿವಿಧ ಇಲಾಖೆಗಳ ಅಧೀನದಲ್ಲಿ ನಿವೇಶವನ್ನು ಹಸ್ತಾಂತರಗೊಳಿಸಿದ್ದು ಕಾನೂನು ತೊಡಕಿನಿಂದ ನಿವೇಶನ ಹಂಚಿಕೆ ರದ್ದಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸಮಾಜದವರೊಂದಿಗೆ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ನಿವೇಶನ ನೀಡುವ ಉದ್ದೇಶವನ್ನು ಅವರಿಗೆ ಮನವರಿಕೆ ಮಾಡಿ ಎಲ್ಲ ಸಮಾಜಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಿವೇಶನವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ, ಮೂಢನಂಬಿಕೆಗಳೇ ತುಂಬಿ ಹೋಗಿದ್ದ ಕಾಲಘಟ್ಟದಲ್ಲಿ ನಾರಾಯಣ ಗುರುಗಳು ಸಮಾಜಕ್ಕೆ ಮಾನವೀಯತೆಯ ಸಂದೇಶದೊಂದಿಗೆ ಜಗತ್ತಿಗೆ ಬೆಳಕು ನೀಡಿದ ಮಹಾನ್ ಚೇತನ. ಸಂಘರ್ಷಕ್ಕೆ ಎಡೆಮಾಡಿಕೊಡದೆ ಸುಧಾರಣೆಯ ಹಾದಿಯ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ದಾರ್ಶನಿಕರು ಎಂದು ಹೇಳಿದರು.ಟಿಪಿಸಿಎಂಎಸ್ ಅಧ್ಯಕ್ಷ ಎಂ.ಆರ್.ಅನಿಲ್ ಕುಮಾರ್, ಪುರಸಭಾ ಸದಸ್ಯರಾದ ರಾಮಕೃಷ್ಣ, ಸಿ.ಎಸ್.ಪ್ರಕಾಶ್, ತಾಲೂಕು ಆರ್ಯ ಈಡಿಗ ಸಂಘದ ಮಾಜಿ ಅಧ್ಯಕ್ಷ ಸಿ.ಜಿ. ಮಂಜಪ್ಪ, ಉಪಾಧ್ಯಕ್ಷ ಸಿ.ಜಿ.ಕುಮಾರ್, ಕಾರ್ಯದರ್ಶಿ ಸಿ.ಎಸ್.ಕಾರ್ತಿಕ್, ನಿರ್ದೇಶಕ ಸಿ.ಜಿ ಜಗದೀಶ್, ಶ್ರೀ ರೇಣುಕಾ ಎಲ್ಲಮ್ಮ ದೇವಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್. ಹರ್ಷ, ಕಾರ್ಯದರ್ಶಿ ಹರೀಶ್, ಸಮಾಜದ ಮುಖಂಡರಾದ ಎಚ್.ಟಿ.ಸುರೇಶ್, ದತ್ತ ಗುರು ಇತರರು ಇದ್ದರು.