ಗ್ಯಾಸ್‌ ಬೆಲೆ ಏರಿಕೆ ಅನಿವಾರ್ಯ, ಆದರೆ ತಾತ್ಕಾಲಿಕ: ಅಣ್ಣಾಮಲೈ ಸಮರ್ಥನೆ

KannadaprabhaNewsNetwork | Published : Apr 10, 2025 1:17 AM

ಸಾರಾಂಶ

ಗ್ಯಾಸ್‌ ಬೇಡಿಕೆ ಹೆಚ್ಚಿದೆ, ಆಮದು ಹೆಚ್ಚಿದೆ. ಅನಿವಾರ್ಯವಾಗಿ ಬೆಲೆಯೂ ಏರಿಕೆಯಾಗಿದೆ ಎಂದು ತಮಿಳುನಾಡು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಕೇಂದ್ರ ಸರ್ಕಾರದ ಬೆಲೆ ಏರಿಕೆಗೆ ಸಮಜಾಯಿಷಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

2014ರಲ್ಲಿ ದೇಶದ ಶೇ. 64 ಕುಟುಂಬಗಳು ಮಾತ್ರ ಗ್ಯಾಸ್ ಬಳಕೆ ಮಾಡುತಿದ್ದವು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದು ಶೇ. 100 ಕ್ಕೇರಿದೆ. ಆದ್ದರಿಂದ ಗ್ಯಾಸ್‌ ಬೇಡಿಕೆ ಹೆಚ್ಚಿದೆ, ಆಮದು ಹೆಚ್ಚಿದೆ. ಅನಿವಾರ್ಯವಾಗಿ ಬೆಲೆಯೂ ಏರಿಕೆಯಾಗಿದೆ ಎಂದು ತಮಿಳುನಾಡು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಕೇಂದ್ರ ಸರ್ಕಾರದ ಬೆಲೆ ಏರಿಕೆಗೆ ಸಮಜಾಯಿಷಿ ನೀಡಿದ್ದಾರೆ.

ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ದರ ಏರಿಕೆಯಾಗಿದೆ, ಇದರಿಂದ ಒಂದು ಹಂತದ ಮೇಲೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಗೂ ಕಷ್ಟವಾಗುತ್ತದೆ. ಆಗ ದರ ಏರಿಕೆ ಅನಿವಾರ್ಯ. ಇದನ್ನು ಟೀಕಿಸುವ ಕಾಂಗ್ರೆಸಿನ ಆರ್ಥಿಕ ತಜ್ಞರಿಗೂ ಗೊತ್ತಿದೆ, ಆದರೆ ಅವರು ಜನರಿಗೆ ಸತ್ಯ ಹೇಳುತ್ತಿಲ್ಲ ಎಂದು ಆರೋಪಿಸಿದರು.

20-30 ವರ್ಷ ಕಾಯುತ್ತೇವೆ:

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತನ್ನ ರಾಜೀನಾಮೆ ಪಕ್ಷದ ವರಿಷ್ಠರ ನಿರ್ಧಾರ, ನಾನೊಬ್ಬ ಕಾರ್ಯಕರ್ತ, ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಈಗ ಇನ್ನೊಂದು ಜವಾಬ್ದಾರಿ ಕೊಟ್ಟರೂ, ಪಕ್ಷ ಏನೇ ಅವಕಾಶಕೊಟ್ಟರೂ ಕೆಲಸ ಮಾಡುತ್ತೇನೆ ಎಂದರು.

ತಮಿಳುನಾಡಿನಲ್ಲಿ ಎಐಡಿಎಂಕೆ ಬಹಳ ದೊಡ್ಡ ದ್ರಾವಿಡ ಪಕ್ಷ. ಅದರ ನಾಯಕ ಪಳನಿಸ್ವಾಮಿ ಅವರು ಕೇಂದ್ರ ಗೃಹಸಚಿವ ಅಮಿತ್‌ ಶಾರನ್ನು ಭೇಟಿ ಆಗಿದ್ದು, ಸಂದೇಶ ಸ್ಪಷ್ಟವಾಗಿದೆ. ಎಐಡಿಎಂಕೆ ಬಿಜೆಪಿ ಜೊತೆ ಮೈತ್ರಿ ಬಯಸುತ್ತಿದೆ. ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಗುರಿ. ತಮಿಳುನಾಡು ಒಂದು ಸುದೀರ್ಘ ಆಟ, ಬಹಳ ವರ್ಷದಿಂದ ತಾಳ್ಮೆಯಿಂದ ಕಾದಿದ್ದೇವೆ, ಕಾಯುತ್ತೇವೆ. ಅಧಿಕಾರ ಪಡೆಯಲು ಇನ್ನು 20 - 30 ವರ್ಷ ಬೇಕಾದರೂ ಆಗಲಿ ಕಾಯುತ್ತೇವೆ ಎಂದರು ಹೇಳಿದರು.

ವಕ್ಫ್‌ ಆ್ಯಕ್ಟ್‌ ತಿದ್ದಪಡಿ ಅದ್ಭುತ:

ಈ ಹಿಂದೆಯೂ ವಕ್ಫ್ ಆ್ಯಕ್ಟ್‌ಗೆ 1995ರಲ್ಲಿ 2013ರಲ್ಲಿ ದೊಡ್ಡ ತಿದ್ದುಪಡಿಗಳಾಗಿವೆ, ಈಗ ಅತಿದೊಡ್ಡ ಬಹಳ ಅದ್ಭುತ ಬದಲಾವಣೆ ತರಲಾಗಿದೆ. ಇದರಿಂದ ಇಸ್ಲಾಂ ಧರ್ಮದಲ್ಲಿರುವ ಅಕ್ಕಂದಿರಿಗೆ, ತಾಯಂದಿರಿಗೆ ಅನುಕೂಲವಾಗಲಿದೆ. ಬಡ ಮುಸ್ಲಿಮರಿಗೆ ಇದರಿಂದ ಅನುಕೂಲವಾಗಲಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಇನ್ನು ಮುಂದೆ ಯಾರೋ ಬಂದು ಇದು ನನ್ನ ಭೂಮಿ ಎಂದು ಹೇಳುವಂತಿಲ್ಲ, ಇದರಲ್ಲಿ ಜಿಲ್ಲಾಧಿಕಾರಿ ಪಾತ್ರ ಏನು ಅನ್ನುವುದು ಮುಖ್ಯ. ಇದು ಸಂವಿಧಾನ ವಿರೋಧಿ ಅಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನ್ಯಾಯಾಲಯದ ಮೊರೆ ಹೋಗಿದ್ದು, ಎಲ್ಲಾ ಪ್ರಕರಣಗಳು ವಜಾಗೊಳ್ಳಲಿದೆ ಎಂದರು.

..........................ಕರ್ನಾಟಕದಲ್ಲಿ ಕಾಂಗ್ರೆಸ್ ಜನರ ಪ್ರೀತಿ ಕಳಕೊಂಡಿದೆ

ಕರ್ನಾಟಕವನ್ನು ಹೊರಗಿನಿಂದ ನೋಡುತ್ತಿದ್ದೇನೆ. ಸರ್ಕಾರದಲ್ಲಿರುವ ಒಬ್ಬ ದೊಡ್ಡ ಮನುಷ್ಯ, ಪವರ್ ಫುಲ್ ವ್ಯಕ್ತಿ ಸೀಡಿ ಹನಿಟ್ರ್ಯಾಪ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ, ಇಡೀ ದೇಶ ನೋಡುತ್ತಿದೆ ಎಂದವರು ಟೀಕಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜನಾಕ್ರೋಶ ಯಾತ್ರೆಗೆ ಎಲ್ಲರೂ ಜೊತೆಯಾಗಬೇಕು. ಕಾಂಗ್ರೆಸ್ ಸರ್ಕಾರ ಜನರ ಪ್ರೀತಿಯನ್ನು ಕಳೆದುಕೊಂಡಿದೆ. ರಾಜ್ಯದಿಂದ ಕಾಂಗ್ರೆಸನ್ನು ಇಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

Share this article